ಬೆಳಗಾವಿ: ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿನವರ (ಬಿ.ಪಿ.ಎಲ್) ಪಡಿತರ ಚೀಟಿ ಪಡೆಯುವ ಆದಾಯ ಮಿತಿಯನ್ನು ಪರಿಷ್ಕರಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವೇಳೆ, ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ.ಸಿ.ಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಆದಾಯ ಮಿತಿ ಪರಿಷ್ಕರಣೆಯ ಅಗತ್ಯ
ಕೇಂದ್ರ ಸರ್ಕಾರವು ಬಿ.ಪಿ.ಎಲ್ ಕಾರ್ಡ್ದಾರರ ವಾರ್ಷಿಕ ಆದಾಯ ಮಿತಿಯನ್ನು ರೂ.1.20 ಲಕ್ಷಕ್ಕೆ ನಿಗದಿಪಡಿಸಿದೆ.
ಆದರೆ, ಕೂಲಿ ಕಾರ್ಮಿಕರಿಗೆ ದಿನಕ್ಕೆ ಸರಾಸರಿ ರೂ.500 ಕೂಲಿ ದೊರೆಯುತ್ತಿರುವುದರಿಂದ, ಅವರ ವಾರ್ಷಿಕ ಆದಾಯವೂ ರೂ.1.80 ಲಕ್ಷಕ್ಕಿಂತ ಹೆಚ್ಚು ಆಗುತ್ತಿದೆ.
ಈ ಹಿನ್ನೆಲೆಯಲ್ಲಿಯೇ ಆದಾಯ ಮಿತಿಯನ್ನು ಪರಿಷ್ಕರಿಸುವ ಅಗತ್ಯ ಉಂಟಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿನ ಬಿ.ಪಿ.ಎಲ್ ಸ್ಥಿತಿ
ಕೇಂದ್ರ ಸರ್ಕಾರ ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ.
ರಾಜ್ಯದಲ್ಲಿ 4.53 ಲಕ್ಷ ಬಿ.ಪಿ.ಎಲ್ ಹಾಗೂ 1.25 ಲಕ್ಷ ಎ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ.
ಜನಸಂಖ್ಯೆಗನುಗುಣವಾಗಿ ರಾಜ್ಯದಲ್ಲಿ ಶೇ.73 ಕುಟುಂಬಗಳು ಬಿ.ಪಿ.ಎಲ್ ಕಾರ್ಡ್ ಪಡೆದಿವೆ.
ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ ಪಾವತಿಯಲ್ಲಿ ರಾಜ್ಯ ಮುಂಚೂಣಿಯಲ್ಲಿರುವುದನ್ನು ಗಮನಿಸಿದರೆ, ಬಿ.ಪಿ.ಎಲ್ ಕುಟುಂಬಗಳ ಪ್ರಮಾಣ ಶೇ.50ರೊಳಗೆ ಇರಬೇಕಿತ್ತು ಎಂದು ಸಚಿವರು ಅಭಿಪ್ರಾಯಪಟ್ಟರು.
ರದ್ದುಪಡಿಸುವಿಕೆ ತಾತ್ಕಾಲಿಕ ಸ್ಥಗಿತ
2017ರಲ್ಲಿ ಆದ್ಯತಾ ಪಡಿತರ ಚೀಟಿಗೆ ಮಾನದಂಡಗಳನ್ನು ರೂಪಿಸಲಾಗಿದೆ.
ಸರ್ಕಾರಿ, ಅನುದಾನಿತ, ಮಂಡಳಿ–ನಿಗಮ, ಸ್ವಾಯತ್ತ ಸಂಸ್ಥೆಗಳ ನೌಕರರು ಹಾಗೂ ಆದಾಯ/ಸೇವಾ/ಜಿ.ಎಸ್.ಟಿ ತೆರಿಗೆ ಪಾವತಿದಾರರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುವುದಿಲ್ಲ.
ಆದಾಯ ಮಿತಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿರುವುದರಿಂದ ತಾತ್ಕಾಲಿಕವಾಗಿ ಯಾವುದೇ ಬಿ.ಪಿ.ಎಲ್ ಕಾರ್ಡ್ಗಳನ್ನು ರದ್ದುಪಡಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವೈದ್ಯಕೀಯ ಆಧಾರ ಮತ್ತು ಮರುಪಡೆಯುವ ಅವಕಾಶ
ಸದ್ಯ ವೈದ್ಯಕೀಯ ಆಧಾರದ ಮೇಲೆ ಮಾತ್ರ ಬಿ.ಪಿ.ಎಲ್ ಕಾರ್ಡ್ ನೀಡಲಾಗುತ್ತಿದೆ.
ಕುಟುಂಬದ ಸದಸ್ಯರು ನೌಕರಿಗೆ ಸೇರಿದ ಕಾರಣದಿಂದ ಕಾರ್ಡ್ ರದ್ದಾದರೆ, ಅವರು ತಮ್ಮೊಂದಿಗೆ ವಾಸವಿಲ್ಲ ಎಂಬುದನ್ನು ಉಲ್ಲೇಖಿಸಿ ತಹಶೀಲ್ದಾರಿಗೆ ಅರ್ಜಿ ಸಲ್ಲಿಸಿದಲ್ಲಿ 15 ದಿನಗಳೊಳಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುವುದು.
ಕ್ಷೇತ್ರವಾರು ಅಂಕಿಅಂಶ
ಬಂಟ್ವಾಳ ಕ್ಷೇತ್ರ: 2023–24ರವರೆಗೆ 48,715 ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್; 2023 ರಿಂದ ಜನವರಿ 2025ರವರೆಗೆ 688 ಕಾರ್ಡ್ ವಿತರಣೆ, 99 ಕಾರ್ಡ್ ರದ್ದು.
ಶ್ರವಣಬೆಳಗೊಳ ಕ್ಷೇತ್ರ: 930 ಬಿ.ಪಿ.ಎಲ್ ಕಾರ್ಡ್ಗಳನ್ನು ಎ.ಪಿ.ಎಲ್ಗೆ ಪರಿವರ್ತನೆ; 964 ಹೊಸ ಅರ್ಜಿಗಳು ಬಾಕಿ—ತ್ವರಿತ ಕ್ರಮಕ್ಕೆ ಶಾಸಕ ಬಾಲಕೃಷ್ಣ.ಸಿ.ಎನ್ ಮನವಿ.







