ಕರ್ನಾಟಕ ಸರ್ಕಾರ ವಿವಿಧ ಇಲಾಖೆಗಳ ನೇಮಕಾತಿಯನ್ನು ಕೈಗೊಂಡಿದೆ. ಗೃಹ ಇಲಾಖೆಯಲ್ಲಿಯೂ ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ತಯಾರಿ ನಡೆದಿದೆ. ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ಸಂದರ್ಭದಲ್ಲಿ ವಯೋಮಿತಿಯನ್ನು ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.
ಈ ಕುರಿತು ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ಸ್ ಅಸೋಸಿಯೇಷನ್ ಪತ್ರದ ಮೂಲಕ ಸರ್ಕಾರದ ಗಮನ ಸೆಳೆದಿದೆ. ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 30, ಎಸ್‌ಸಿ/ ಎಸ್‌ಟಿ/ ಒಬಿಸಿ ವರ್ಗಕ್ಕೆ 33ಕ್ಕೆ ಏರಿಕೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿದೆ.
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿಯನ್ನು ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ಅಲ್ಲದೇ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಮಾನ್ಯ ವರ್ಗಕ್ಕೆ 30 ವರ್ಷ, SC/ ST/ OBCಗೆ 33ಕ್ಕೆ ವಯೋಮಿತಿ ಹೆಚ್ಚಿಸುವುದಾಗಿ ಹೇಳಿದ್ದರು.
ಹಲವು ವರ್ಷಗಳಿಂದ ಈ ಕುರಿತು ಹೋರಾಟವನ್ನು ನಡೆಸಲಾಗುತ್ತದೆ. ಮುಖ್ಯಮಂತ್ರಿಗಳು ಮೈಸೂರು ವಿಮಾನ ನಿಲ್ದಾಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ವಯೋಮಿತಿ 33 ವರ್ಷಕ್ಕೆ ಹೆಚ್ಚಿಸುವೆ ಎಂದು 20/09/2024ರಂದು ಹೇಳಿಕೆಯನ್ನು ನೀಡಿದ್ದರು. ಹಲವು ಅಭ್ಯರ್ಥಿಗಳು ಖಾಸಗಿ ಕೆಲಸ ಬಿಟ್ಟು ನೇಮಕಾತಿಗಾಗಿ ಓದಿದ್ದಾರೆ. ಆದರೆ ಸರ್ಕಾರ ಇನ್ನೂ ಈ ಕುರಿತು ತೀರ್ಮಾನ ಕೈಗೊಂಡಿಲ್ಲ ಇದು ಅಭ್ಯರ್ಥಿಗಳನ್ನು ಗೊಂದಲಕ್ಕೆ ತಳ್ಳಿದೆ.
ಆದ್ದರಿಂದ ಗೃಹಮಂತ್ರಿಗಳು, ಮುಖ್ಯಮಂತ್ರಿಗಳು ತೆಲಂಗಾಣ ಮಾದರಿಯಲ್ಲಿ ಪೊಲೀಸರ ಟೋಪಿ ಬದಲಾವಣೆ ಮಾಡಿದಂತೆ ನೇಮಕಾತಿಯ ವಯೋಮಿತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಬೇಕು ಎಂದು ಮನವಿ ಮಾಡಲಾಗಿದೆ.
ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿಯನ್ನು ನೆರೆಹೊರೆ ರಾಜ್ಯಗಳ ಮಾದರಿಯಲ್ಲಿ ಅಳವಡಿಕೆ ಮಾಡಿ ಬಡವರ ಮಕ್ಕಳು ನಿಷ್ಠಾವಂತ ಪೊಲೀಸ್ ಪೇದೆಯಾಗಲು ಅವಕಾಶ ಮಾಡಿಕೊಡಬೇಕು ಎಂದು ಲಕ್ಷಾಂತರ ಅಭ್ಯರ್ಥಿಗಳು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಗಮನ ಸೆಳೆಯಲಾಗಿದೆ.
ಸಂಸದರಿಂದಲೂ ಪತ್ರ: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ವಯೋಮಿತಿ ಏರಿಕೆ ಕುರಿತು ಚಾಮರಾಜನಗರ ಸಂಸದ ಸುನೀಲ್ ಬೋಸ್ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ.
అఖిల ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದ ಕಾಂತ ಕುಮಾರ್ ಆರ್. ಅವರು ಸಲ್ಲಿಸಿರುವ ಮನವಿ ಪತ್ರವನ್ನು ಲಗತ್ತಿಸಿ, ಸದರಿಯವರು ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಯ ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಹಾಗೂ ಎಸ್.ಸಿ/ ಎಸ್.ಟಿ/ ಓ.ಬಿ.ಸಿ ಅಭ್ಯರ್ಥಿಗಳಿಗೆ 33 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಮನವಿ ಪತ್ರದಲ್ಲಿ ಕೋರಿರುತ್ತಾರೆ.
ಸದರಿಯವರ ಸಲ್ಲಿಸಿರುವ ಮನವಿ ಪತ್ರವನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ತಮ್ಮ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ.







