Home » ರಾಜ್ಯ » ಒಳಮೀಸಲಾತಿ : ತಂದೆಯ ಜಾತಿಯೇ ಮಕ್ಕಳದ್ದು

ಒಳಮೀಸಲಾತಿ : ತಂದೆಯ ಜಾತಿಯೇ ಮಕ್ಕಳದ್ದು

ಬೆಂಗಳೂರು :  ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮನೆ-ಮನೆ ಸಮೀಕ್ಷೆ ಸೋಮವಾರ ಅಧಿಕೃತವಾಗಿ ಶುರುವಾಗಿದ್ದು, ಪರಿಶಿಷ್ಟ ಜಾತಿಯವರ ಉಪಜಾತಿ/ಮುಖ್ಯಜಾತಿ, ಆರ್ಥಿಕತೆ, ಔದ್ಯೋಗಿಕ, ರಾಜಕೀಯ ಪ್ರಾತಿನಿಧ್ಯ ಹಾಗೂ ಸಾಮಾಜಿಕ ತಾರತಮ್ಯದ ಬಗ್ಗೆ ಸಮಗ್ರ ದತ್ತಾಂಶ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ.

ಈ ವೇಳೆ ಕೆಲ ಕಡೆ ಗಣತಿದಾರರಿಗೆ ಸಣ್ಣಪುಟ್ಟ ಗೊಂದಲಗಳು ಉಂಟಾಗಿದ್ದವು ಹಾಗೂ ಗಣತಿಗೆ ಒಳಗಾಗುತ್ತಿದ್ದವರಿಗೆ ಮಾಹಿತಿ ಕೊರತೆಯಿಂದ ಸ್ವಲ್ಪಮಟ್ಟಿಗೆ ಸಮಸ್ಯೆಯಾಗಿತ್ತು. ಮಾಹಿತಿದಾರರ ಫೋಟೋ ತೆಗೆದು ಅಪ್ಲೋಡ್ ಮಾಡುವುದು ಕಡ್ಡಾಯ. ಇದಕ್ಕೆ ಕೆಲವರು ಅಸಹಕಾರ ತೋರುತ್ತಿದ್ದು, ಅಂತಹವರ ಬಳಿ ಬಿಪಿಎಲ್‌, ಆಧಾರ್ ಕಾರ್ಡ್‌ ಅಥವಾ ಜಾತಿ ಪ್ರಮಾಣಪತ್ರ ಪಡೆದು ಮುಂದುವರೆಯಲು ಅವಕಾಶ ಕಲ್ಪಿಸಲಾಗಿದೆ.

ತಂದೆಯ ಜಾತಿಯೇ ಮಕ್ಕಳದ್ದು:

ಅನ್ಯ ಜಾತಿ ವಿವಾಹದ ವೇಳೆ ಪತಿ ಅನ್ಯಜಾತಿಯವರಾಗಿದ್ದು ಪತ್ನಿ ಪರಿಶಿಷ್ಟ ಜಾತಿಯವರಾಗಿದ್ದರೆ ಅವರ ಮಕ್ಕಳನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸಬಾರದು. ಪತ್ನಿ ತನ್ನ ಜಾತಿಯನ್ನೇ ನೀಡಬೇಕೆಂದು ಒತ್ತಾಯಿಸಿದರೂ ಕಾನೂನು ಪ್ರಕಾರ ತಂದೆಯ ಜಾತಿಯೇ ಮಕ್ಕಳದ್ದು. ಹೀಗಾಗಿ ಅದಕ್ಕೆ ಅವಕಾಶ ನೀಡಬಾರದು ಎಂದು ಗಣತಿದಾರರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಇನ್ನು ಅಂತರ್‌ ಜಾತಿ ವಿವಾಹವಾದ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ಹೆಣ್ಣು ಬೇರೆ ಜಾತಿಯ ಕುಟುಂಬಕ್ಕೆ ಸೇರುತ್ತದೆ. ಆ ಕುಟುಂಬ ಪರಿಶಿಷ್ಟ ಜಾತಿಗೆ ಸೇರಿರುವುದಿಲ್ಲ. ಇಂತಹ ಸಮಯದಲ್ಲಿ ಶಿಬಿರದಲ್ಲಿ ಹೋಗಿ ಆ ಹೆಣ್ಣು ಪರಿಶಿಷ್ಟ ಜಾತಿ ಎಂದು ಪ್ರತ್ಯೇಕವಾಗಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ.


ಒಂದು ಕುಟುಂಬದಲ್ಲಿ 10 ಮಂದಿ ಸದಸ್ಯರಿದ್ದು, 9 ಮಂದಿ ಪರಿಶಿಷ್ಟ ಜಾತಿ ಎಂದು ನಮೂದಿಸುತ್ತಾರೆ. ಹತ್ತನೇ ವ್ಯಕ್ತಿ ಒಬ್ಬ ಮಾತ್ರ ತನಗೆ ಇಷ್ಟ ಇಲ್ಲದೆ ಜಾತಿ ಗೊತ್ತಿಲ್ಲ ಎಂದರೆ ‘ಡೋಂಟ್‌ ನೋ’ ಆಯ್ಕೆ ಕೊಡಬಹುದು ಎಂದು ಹೇಳಲಾಗಿದೆ. ಇದರಿಂದ ಅನಗತ್ಯ ವಾಗ್ವಾದ, ಗೊಂದಲಗಳು ಉಂಟಾಗದಂತೆ ಎಚ್ಚರವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗಣತಿದಾರರು ಕೇವಲ ಪರಿಶಿಷ್ಟ ಜಾತಿಯವರ ಮನೆಗೆ ಮಾತ್ರವಲ್ಲ ಪ್ರತಿ ಮನೆಗೂ ಭೇಟಿ ನೀಡುತ್ತಾರೆ. ಪರಿಶಿಷ್ಟ ಜಾತಿಯವರ ಮನೆಯಿಂದ ಎಲ್ಲಾ ರೀತಿಯ ದತ್ತಾಂಶ ಸಂಗ್ರಹಿಸುತ್ತಾರೆ. ಪರಿಶಿಷ್ಟ ಜಾತಿ ಅಲ್ಲದಿದ್ದರೆ ಸದಸ್ಯರ ಸಂಖ್ಯೆ ಮಾತ್ರ ನಮೂದಿಸಿ ವಾಪಸಾಗುತ್ತಾರೆ. ಮೊದಲ ದಿನ ಸಮೀಕ್ಷೆ ಯಶಸ್ವಿಯಾಗಿ ನಡೆದಿದೆ.

– ಡಾ.ಕೆ. ರಾಕೇಶ್ ಕುಮಾರ್, ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ

ಸಮೀಕ್ಷೆ ಅಂಕಿ-ಅಂಶ ಬಹಿರಂಗ ಇಲ್ಲ

ಮೊದಲ ದಿನ ಸಣ್ಣ ಪುಟ್ಟ ಗೊಂದಲ ಹೊರತುಪಡಿಸಿ ಯಾವುದೇ ತಾಂತ್ರಿಕ ಅಥವಾ ಗಂಭೀರ ಅಡಚಣೆ ಇಲ್ಲದೆ ಯಶಸ್ವಿಯಾಗಿ ಸಮೀಕ್ಷೆ ನಡೆದಿದೆ. ಸಂಗ್ರಹವಾಗಿರುವ ಅಂಕಿ-ಸಂಖ್ಯೆ ಹಾಗೂ ದತ್ತಾಂಶವನ್ನು ಬಹಿರಂಗಗೊಳಿಸದಂತೆ ಹಾಗೂ ತನ್ಮೂಲಕ ಯಾವ ಸಮುದಾಯಕ್ಕೂ ಹತಾಶೆ ಉಂಟು ಮಾಡದಂತೆ ಎಚ್ಚರ ವಹಿಸುತ್ತಿದ್ದೇವೆ. ನಿಗದಿತ ಸಮಯದಲ್ಲಿ ನಾವೇ ಶೇಕಡಾವಾರು ಸಮೀಕ್ಷೆ ವಿವರ ಬಹಿರಂಗಪಡಿಸುತ್ತೇವೆ.

– ಎಚ್.ಎನ್‌. ನಾಗಮೋಹನ್‌ ದಾಸ್‌, ನಿ. ನ್ಯಾಯಮೂರ್ತಿ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This