Home » ರಾಜ್ಯ » ಒಂದು ವಾರದಲ್ಲಿ ಗೃಹಲಕ್ಷ್ಮೀ ಹಣ ಖಾತೆಗೆ ಜಮೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಒಂದು ವಾರದಲ್ಲಿ ಗೃಹಲಕ್ಷ್ಮೀ ಹಣ ಖಾತೆಗೆ ಜಮೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ : ಇನ್ನೊಂದು ವಾರದಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಸಿದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಣ ಬಿಡುಗಡೆ ಬಗ್ಗೆ ಭರವಸೆ ನೀಡಿದ್ದಾರೆ.

ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ ನಮ್ಮ ಮುಖ್ಯಮಂತ್ರಿ ಎಂದು ಹೇಳಿದರು. ಇನ್ನು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ಸಾಮಾನ್ಯರ ಪಾಲಿಗೆ ಹೊರೆಯಾಗುತ್ತಿದೆ. ಕೇಂದ್ರದ ವಿರುದ್ಧ ಮಾತನಾಡಲು ಆಗದ ರಾಜ್ಯ ಬಿಜೆಪಿ ನಾಯಕರು, ಜನಪರವಾಗಿರುವ ನಮ್ಮ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ಸ್ವತಃ ಬಲದ ಮೇಲೆ ಅಧಿಕಾರಕ್ಕೇರಲು ಸಾಧ್ಯವಾಗದ ಬಿಜೆಪಿ ನಾಯಕರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುಂದಿನ ತಿಂಗಳು 20 ನೇ ತಾರೀಖಿಗೆ ನಮ್ಮ ಸರ್ಕಾರ ಅಧಿಕಾರ ಬಂದು 2 ವರ್ಷ ಪೂರೈಸುತ್ತಿದೆ. ಈವರೆಗೆ 80 ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಜೇಬಿಗೆ ಹಾಕಿದ್ದೇವೆ. ಇದು ಸಿದ್ದರಾಮಯ್ಯನವರಿಗೆ ಜನ ಸಾಮಾನ್ಯರ ಮೇಲಿರುವ ಬದ್ಧತೆ ಎಂದು ತಿಳಿಸಿದರು.

2023 ರಲ್ಲಿ ಜನರ ವಿಶ್ವಾಸ ಗಳಿಸಿ ಕರ್ನಾಟದಲ್ಲಿ 136 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿದ್ದೇವೆ. ಸರ್ಕಾರ ಬಂದು 100 ದಿನಗಳ ಒಳಗೆ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಮನೆ ಬಾಗಿಲಿಗೆ ತಂದಿದ್ದೇವೆ. 136 ಸ್ಥಾನ ಗೆದ್ದರೂ ರಾಜ್ಯ ಸರ್ಕಾರ ಉಳಿಯುವುದಿಲ್ಲ, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಬರಲು ಸಾಧ್ಯವಿಲ್ಲ ಅಂತ ಬಿಜೆಪಿಗರು ಹೇಳುತ್ತಿದ್ದರು. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ.

ಕರ್ನಾಟಕದ ಇತಿಹಾಸದಲ್ಲೇ ಎಂದೂ ಕಾಣದಂತಹ ಹಲವಾರು ಯೋಜನೆಗಳ ಮೂಲಕ, ಅಭಿವೃದ್ಧಿಯ ಮೂಲಕ ನಮ್ಮ ಸರಕಾರ ಇಂದು ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸುಮಾರು 4-5 ಸಾವಿರ ರೂಪಾಯಿ ಲಾಭ ಮಾಡಿಕೊಡಲಾಗುತ್ತಿದೆ. ತನ್ಮೂಲಕ ಕುಟುಂಬಗಳ ಆರ್ಥಿಕ ಶಕ್ತಿಯನ್ನು, ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This