ಹುಮನಾಬಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ಡಾಕುಳಗಿ ಗ್ರಾಮದಲ್ಲಿ ಬುಧವಾರ ರಾತ್ರಿ ಭೂಮಿ ಕಂಪಿಸಿದ ಅನುಭವ ಉಂಟಾಗಿ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ನೆಲದಡಿಯಿಂದ ಭಾರಿ ಶಬ್ದ ಕೇಳಿಬಂದಿದ್ದು, ಅದಕ್ಕೆ ತಕ್ಷಣ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಭೂಮಿ ಕಂಪಿಸಿದ ಪರಿಣಾಮ ಮನೆಗಳೊಳಗಿದ್ದ ವಸ್ತುಗಳು ಅಲುಗಾಡಿದ್ದು, ಅಚಾನಕ್ ಉಂಟಾದ ಘಟನೆಗೆ ಬೆದರಿದ ಗ್ರಾಮಸ್ಥರು ಮನೆಯೊಳಗಿಂದ ಹೊರಗೆ ಓಡಿಬಂದಿದ್ದಾರೆ. ಕೆಲಕಾಲ ಗ್ರಾಮದಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಗುರುವಾರ ತಹಶೀಲ್ದಾರ್ ಅಂಜುಂ ತಬಸುಮ್ ಅವರು ಅಧಿಕಾರಿಗಳ ತಂಡದೊಂದಿಗೆ ಡಾಕುಳಗಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಈ ಘಟನೆಯು ರಿಕ್ಟರ್ ಮಾಪಕದಲ್ಲಿ ಯಾವುದೇ ಭೂಕಂಪನವಾಗಿ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಡಾಕುಳಗಿ, ಸಿಂಧಬಂದಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ ಅವರು, ಮುನ್ನೆಚ್ಚರಿಕೆ ವಹಿಸಿ ಶಾಂತವಾಗಿರುವಂತೆ ಮನವಿ ಮಾಡಿದರು. ಯಾವುದೇ ಅಪಾಯದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಡಳಿತಕ್ಕೆ ಮಾಹಿತಿ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಿಡಿಒ ರಾಜಕುಮಾರ್ ಬುಳ್ಳಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೆಯೂ ಸಂಭವಿಸಿದ್ದ ಘಟನೆಗಳು
ಇದೇ ರೀತಿಯ ಭೂಮಿ ಕಂಪಿಸಿದ ಅನುಭವಗಳು ಈ ಹಿಂದೆಯೂ ಹುಮನಾಬಾದ್ ತಾಲ್ಲೂಕಿನ ಡಾಕುಳಗಿ, ನಿಂಬೂರ್, ಸೀತಾಳಗೇರಾ, ಹುಣಸನಾಳ, ಕುಮಾರ್ ಚಿಂಚೋಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವರದಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಆದರೂ ತಜ್ಞರ ವರದಿ ಪ್ರಕಾರ ಇದನ್ನು ಭೂಕಂಪನ ಎಂದು ದೃಢಪಡಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಾರ್ವಜನಿಕರಲ್ಲಿ ಭಯ ಬೇಡ ಎಂದು ಸ್ಪಷ್ಟಪಡಿಸಿದೆ.
Source : ಪ್ರಜಾವಾಣಿ







