ಔರಾದ್ ತಾಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನವು ಬುಧವಾರ ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಡೆಯಿತು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದ ಔರಾದ್ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಮನ್ಮಥ್ ಡೋಳೆ ಅವರು, ಪ್ರಜ್ಞಾವಂತ, ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಅತಿ ಪ್ರಮುಖ ಅಸ್ತ್ರ ಎಂದು ಅಭಿಪ್ರಾಯಪಟ್ಟರು.
ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಅಪಾರವಾಗಿದೆ. ಶಿಕ್ಷಣದಿಂದ ಮಾತ್ರ ವಿಚಾರಶಕ್ತಿ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಲು ಸಾಧ್ಯವೆಂದು ಅವರು ಹೇಳಿದರು. ಕನ್ನಡ ಭಾಷೆ ನಮ್ಮ ಆತ್ಮಗೌರವ, ಸಂಸ್ಕೃತಿಯ ಪ್ರತೀಕವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಹೊಣೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದೇವರು, ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಯುತ್ತದೆ ಎಂದು ತಿಳಿಸಿದರು. ತಾಂತ್ರಿಕ ಯುಗದಲ್ಲಿ ಇಂಗ್ಲಿಷ್ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷೆಯ ಬಳಕೆ, ಅಧ್ಯಯನ ಮತ್ತು ಪ್ರಚಾರ ಅತ್ಯಂತ ಅಗತ್ಯವಾಗಿದೆ. ಮನೆ, ಶಾಲೆ ಮತ್ತು ಸಮಾಜದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕೆಂದು ಅವರು ಕರೆ ನೀಡಿದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಕಾರ್ಯಕ್ರಮಗಳಲ್ಲ, ಅವು ಜನರಲ್ಲಿ ಭಾಷಾ ಜಾಗೃತಿ ಮೂಡಿಸುವ ಮಹತ್ವದ ವೇದಿಕೆಗಳಾಗಿವೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಿ.ಎಂ. ಅಮರವಾಡಿ ಅವರು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕಸಾಪ್‌ನ ಪಾತ್ರವನ್ನು ವಿವರಿಸಿದರು.
ಚಿಕ್ಕಮಗಳೂರಿನ ಸಂಸ್ಕೃತಿ ಚಿಂತಕ ಚಟ್ನಳ್ಳಿ ಮಹೇಶ್ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ಸಂಜೀವಕುಮಾರ್ ಜುಮ್ಮಾ ಅವರು ಸಾಂಪ್ರದಾಯಿಕವಾಗಿ ಧ್ವಜ ಹಸ್ತಾಂತರ ನೆರವೇರಿಸಿದರು.
ಸಮ್ಮೇಳನಕ್ಕೆ ಮುನ್ನ ಪಟ್ಟಣದ ಅಮರೇಶ್ವರ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು. ಈ ಮೆರವಣಿಗೆ ಬಸವೇಶ್ವರ ವೃತ್ತ, ಕನಕದಾಸ ವೃತ್ತ, ಶಿವಾಜಿ ವೃತ್ತ, ಕನ್ನಡಾಂಬೆ ವೃತ್ತ ಹಾಗೂ ಡಾ. ಚನ್ನಬಸವ ಪಟ್ಟದೇವರ ವೃತ್ತಗಳನ್ನು ದಾಟಿ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದವರೆಗೆ ಸಾಗಿತು. ದಾರಿಯುದ್ದಕ್ಕೂ ಕನ್ನಡ ಧ್ವಜಗಳು ಹಾರಾಡಿ, ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಘೋಷಣೆಗಳು ಮೊಳಗಿದವು. ವಿದ್ಯಾರ್ಥಿಗಳು, ಯುವಕರು ಹಾಗೂ ಕನ್ನಡಾಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ರೈತ ಮಹಿಳೆ ಕವಿತಾ ಮಿಶ್ರಾ, ತಹಶೀಲ್ದಾರ್ ಮಹೇಶ್ ಪಾಟೀಲ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಸಿಪಿಐ ರಘವೀರಸಿಂಗ್ ಠಾಕೂರ್, ರಾಮಶೆಟ್ಟಿ ಪನ್ನಾಳೆ, ಶಿವರಾಜ್ ಅಲ್ಮಾಜೆ ಸೇರಿದಂತೆ ಅನೇಕ ಗಣ್ಯರು, ಹಿರಿಯರು, ಕಿರಿಯರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು ಸಮ್ಮೇಳನಕ್ಕೆ ಕಳೆ ತುಂಬಿದರು.
ಒಟ್ಟಾರೆ ಔರಾದ್ ತಾಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವವನ್ನು ಮತ್ತೊಮ್ಮೆ ಸಮಾಜದ ಮುಂದೆ ಉನ್ನತವಾಗಿ ಪ್ರತಿಪಾದಿಸಿದ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿತು.









