Home » ಬೀದರ ಜಿಲ್ಲೆ » ಜಮಲಾಪುರ ಶಾಲೆಯ ಬಿಸಿ ಊಟ ಸೇವಿಸಿ ಮಕ್ಕಳು ಅಸ್ವಸ್ಥ – ಅಧಿಕಾರಿಗಳ ದೌಡು!

ಜಮಲಾಪುರ ಶಾಲೆಯ ಬಿಸಿ ಊಟ ಸೇವಿಸಿ ಮಕ್ಕಳು ಅಸ್ವಸ್ಥ – ಅಧಿಕಾರಿಗಳ ದೌಡು!

ಔರಾದ್: ಜಮಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಧ್ಯಾಹ್ನ ಬಿಸಿ ಊಟ ಸೇವಿಸಿದ ನಂತರ ಕೆಲ ವಿದ್ಯಾರ್ಥಿಗಳಿಗೆ ಅಸ್ವಸ್ಥತೆ ಕಾಣಿಸಿಕೊಂಡ ಘಟನೆ ನಡೆದಿದೆ.

ಮಧ್ಯಾಹ್ನದ ಬಿಸಿ ಊಟ ಸೇವಿಸಿದ ಬಳಿಕ 2-3 ಮಕ್ಕಳಿಗೆ ತಲೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಆರೋಗ್ಯ ಇಲಾಖೆ ಹಾಗೂ ಆಡಳಿತ ಯಂತ್ರಾಂಗ ಎಚ್ಚೆತ್ತುಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಉಳಿದ 50ಕ್ಕೂ ಅಧಿಕ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಈ ಘಟನೆಯ ಸುದ್ದಿ ತಿಳಿದಂತೆ ಔರಾದ್ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬದೊಲೆ, ಸಹಾಯಕ ಆಯುಕ್ತ ಶಕೀಲ್, ತಹಸೀಲ್ದಾರ್ ಮಹೇಶ್ ಪಾಟೀಲ್, ತಾಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ಕಿರಣ್ ಪಾಟೀಲ್, ಡಿವೈಎಸ್‌ಪಿ ಶಿವಾನಂದ ಪವಾಡ ಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕುರ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಶಾಲೆಯ ಬಿಸಿ ಊಟ ವ್ಯವಸ್ಥೆ, ಆಹಾರದ ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ಪಡೆದು, ಆಹಾರ ಮಾದರಿ ಸಂಗ್ರಹಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ ಅವರು ಮಕ್ಕಳ ಆರೋಗ್ಯ ಪರಿಸ್ಥಿತಿ ಕುರಿತು ವಿಚಾರಿಸಿ,
“ಮಕ್ಕಳ ಆರೋಗ್ಯವೇ ಮೊದಲ ಆದ್ಯತೆ. ಈ ಘಟನೆಯಲ್ಲಿ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ವಿದ್ಯಾರ್ಥಿಗಳ ಪಾಲಕರಿಗೆ ಭರವಸೆ ನೀಡಿದರು.
ಪ್ರಸ್ತುತ ಆಸ್ಪತ್ರೆಗೆ ದಾಖಲಾದ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ತನಿಖೆಯ ನಂತರ ಘಟನೆಯ ನಿಖರ ಕಾರಣ ತಿಳಿದುಬರಲಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This