ಔರಾದ್ ತಾಲೂಕಿನ ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಶುದ್ಧ ಕುಡಿಯುವ ನೀರಿನ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. 1ರಿಂದ 7ನೇ ತರಗತಿ ವರೆಗೆ ಒಟ್ಟು 140 ವಿದ್ಯಾರ್ಥಿಗಳು ಓದುತ್ತಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಶಾಲೆಯಲ್ಲೇ ಕುಡಿಯುವ ನೀರು ಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮನೆಯಿಂದಲೇ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಆವರಣದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಸಂಪರ್ಕ ಕಲ್ಪಿಸಲಾಗಿದ್ದರೂ, ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಅಲ್ಲದೆ ಶಾಲೆ ಆರಂಭವಾಗುವ ಮೊದಲು ನೀರು ಬಂದು ಹೋಗುವುದರಿಂದ ಶಾಲಾ ವೇಳೆಯಲ್ಲಿ ಯಾವುದೇ ಉಪಯೋಗವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸಮಸ್ಯೆಗೆ ಪರಿಹಾರವಾಗಿ ಎರಡು ತಿಂಗಳ ಹಿಂದೆ ಶಾಲಾ ಮಕ್ಕಳು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಬಳಿಕ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಕೊಳವೆ ಬಾವಿ ಕೊರೆಸಿ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಅಲ್ಲಿಯವರೆಗೆ ಕ್ಯಾನ್ ಮೂಲಕ ನೀರು ಪೂರೈಸುವುದಾಗಿ ತಿಳಿಸಿದ್ದರು. ಆದರೆ ಈ ವ್ಯವಸ್ಥೆ ನಿತ್ಯ ನಡೆಯುತ್ತಿಲ್ಲ. ಅನೇಕ ಮಕ್ಕಳು ಮತ್ತೆ ಮನೆಯಿಂದಲೇ ನೀರು ತರಬೇಕಾಗಿದೆ ಎಂದು ನಾಗಮಾರಪಳ್ಳಿ ನಿವಾಸಿ ಧನರಾಜ ಕಾಂಬಳೆ ತಿಳಿಸಿದ್ದಾರೆ.
ಶಾಲಾ ಶಿಕ್ಷಕರೂ ಕೂಡ ಕುಡಿಯುವ ನೀರಿನ ಸಮಸ್ಯೆಯೇ ಪ್ರಮುಖ ತೊಂದರೆ ಎಂದು ಹೇಳಿದ್ದಾರೆ. ಜೆಜೆಎಂ ಸಂಪರ್ಕ ಇದ್ದರೂ ಪ್ರಯೋಜನವಾಗುತ್ತಿಲ್ಲ. ಶುದ್ಧ ನೀರಿನ ಘಟಕ ಹಾಗೂ ಕೊಳವೆ ಬಾವಿ ಅಳವಡಿಸಿದರೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದ್ದಾರೆ. ನೀರಿನ ಕೊರತೆಯಿಂದ ಶೌಚಾಲಯ ಬಳಕೆಗೂ ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಔರಾದ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ ಪ್ರತಿಕ್ರಿಯಿಸಿ, “ನಾಗಮಾರಪಳ್ಳಿ ಶಾಲಾ ಆವರಣದಲ್ಲಿ ಕೊಳವೆ ಬಾವಿಗೆ ಮಂಜೂರಾಗಿದೆ. ತಜ್ಞರನ್ನು ಕರೆಸಿ ನೀರು ಇರುವ ಬಗ್ಗೆ ಖಾತರಿ ಮಾಡಿಕೊಂಡಿದ್ದೇವೆ. ಆದಷ್ಟು ಬೇಗ ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುವುದು” ಎಂದಿದ್ದಾರೆ.
ಗ್ರಾಮಸ್ಥ ಧನರಾಜ ಕಾಂಬಳೆ ಮಾತನಾಡಿ, “ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಶಾಸಕ ಪ್ರಭು ಚವಾಣ್ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಕೆಲ ದಿನ ಕ್ಯಾನ್ ನೀರು ನೀಡಿದರು. ಈಗ ಅದನ್ನೂ ನಿಲ್ಲಿಸಿದ್ದಾರೆ. ಶಾಶ್ವತ ಪರಿಹಾರ ಅಗತ್ಯ” ಎಂದು ಹೇಳಿದ್ದಾರೆ.
ಶಾಲಾ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ತಕ್ಷಣವೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ನಾಗಮಾರಪಳ್ಳಿ ಗ್ರಾಮಸ್ಥರು ಹಾಗೂ ಶಿಕ್ಷಕರು ಆಗ್ರಹಿಸಿದ್ದಾರೆ.







