Home » ಬೀದರ ಜಿಲ್ಲೆ » ಗಣರಾಜ್ಯೋತ್ಸವದ ಸಂಭ್ರಮದ ನಡುವೆ ಅಲೆಮಾರಿ ಸಮುದಾಯದ ಬೇಡಿಕೆ: ನಮಗೂ ಸಮಾನ ಹಕ್ಕುಗಳು ಬೇಕು

ಗಣರಾಜ್ಯೋತ್ಸವದ ಸಂಭ್ರಮದ ನಡುವೆ ಅಲೆಮಾರಿ ಸಮುದಾಯದ ಬೇಡಿಕೆ: ನಮಗೂ ಸಮಾನ ಹಕ್ಕುಗಳು ಬೇಕು

ಔರಾದ್‌, ಜನವರಿ 25: 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಭಟನಾ ಸ್ಥಳದಲ್ಲೇ ಸೇರಿದ್ದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದವರು ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ಪಟ್ಟಣದ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅಲೆಮಾರಿ ಸಮುದಾಯದ ಮುಖಂಡರು, “ಭಾರತ ಸಂವಿಧಾನವು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಆದರೆ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವು ಇನ್ನೂ ಮೂಲಭೂತ ಸೌಲಭ್ಯಗಳು, ವಸತಿ ಹಕ್ಕು ಮತ್ತು ಸಾಮಾಜಿಕ ಭದ್ರತೆಗಳಿಂದ ವಂಚಿತವಾಗಿಯೇ ಉಳಿದಿದೆ. ಸಂವಿಧಾನದ ಆಶಯದಂತೆ ನಮಗೂ ನ್ಯಾಯ ಸಿಗಬೇಕು” ಎಂದು ಆಗ್ರಹಿಸಿದರು.
ಸರ್ಕಾರದಿಂದ ಮಂಜೂರಾಗಿರುವ ನಿವೇಶನಗಳನ್ನು ತಕ್ಷಣ ಹಂಚಿಕೆ ಮಾಡಬೇಕು, ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಅಲೆಮಾರಿ ಸಮುದಾಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ಅವರು ತಿಳಿಸಿದರು. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಗಣರಾಜ್ಯೋತ್ಸವವು ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೆನಪಿಸುವ ದಿನ. ಈ ದಿನದಂದು ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಾ, ನಮ್ಮ ಹೋರಾಟ ನ್ಯಾಯ ಸಿಗುವವರೆಗೂ ಮುಂದುವರಿಯಲಿದೆ” ಎಂದು ಪ್ರತಿಭಟನಾ ಮುಖಂಡರು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಅನೇಕರು ಭಾಗವಹಿಸಿದ್ದರು. ‘ನಮಗೂ ನ್ಯಾಯ ಬೇಕು’, ‘ವಸತಿ ನಮ್ಮ ಹಕ್ಕು’ ಎಂಬ ಘೋಷಣೆಗಳೊಂದಿಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯಿತು.
ಸರ್ಕಾರ ಕೂಡಲೇ ಸ್ಪಂದಿಸಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This