ಬೆಂಗಳೂರು :ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಸರ್ಕಾರದಿಂದ ಮಂಜೂರಾದ ಜಮೀನುಗಳು ಪರಭಾರೆ ಆಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ, 1978 ಅನ್ನು ಜಾರಿಗೆ ತರಲಾಗಿದೆ. ಸದರಿ ಕಾಯ್ದೆಯು ದಿನಾಂಕ 01-01-1979 ರಿಂದ ಜಾರಿಯಲ್ಲಿ ಇದೆ.
ಈ ಕಾಯ್ದೆಯ ಮುಖ್ಯ ಉದ್ದೇಶ, ಎಸ್ಸಿ/ಎಸ್ಟಿ ವರ್ಗದ ಫಲಾನುಭವಿಗಳು ಅವರಿಗೆ ಮಂಜೂರಾದ ಜಮೀನನ್ನು ಸ್ವತಃ ಸಾಗುವಳಿ ಮಾಡಿಕೊಂಡು ಜೀವನೋಪಾಯ ನಡೆಸಬೇಕು ಎಂಬ ಸದುದ್ದೇಶವನ್ನು ಹೊಂದಿದೆ.
ಜಮೀನು ಪರಭಾರೆಗೆ ನಿರ್ಬಂಧ
ಈ ಕಾಯ್ದೆ ಜಾರಿಯಲ್ಲಿರುವುದರಿಂದ,
ಕಾಯ್ದೆ ಜಾರಿಗೂ ಮೊದಲು ಹಾಗೂ ನಂತರ ಮಂಜೂರಾದ ಯಾವುದೇ ಜಮೀನನ್ನು
❌ ಮಾರಾಟ
❌ ಗಿರವಿ
❌ ಬಾಡಿಗೆ
❌ ಉಡುಗೊರೆ
❌ ವಿನಿಮಯ
ಮಾಡುವಂತಿಲ್ಲ.
ಒಂದು ವೇಳೆ ಜಮೀನನ್ನು ಪರಭಾರೆ ಮಾಡಬೇಕಾದ ಅನಿವಾರ್ಯತೆ ಇದ್ದಲ್ಲಿ, ಕಾಯ್ದೆಯ ಕಲಂ 4(2) ರನ್ವಯ ಸರ್ಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಕಾಯ್ದೆ ಉಲ್ಲಂಘನೆ ಪತ್ತೆ ಮತ್ತು ಕ್ರಮ
ಈ ಕಾಯ್ದೆ ಉಲ್ಲಂಘನೆಯ ಪ್ರಕರಣಗಳನ್ನು:
ಗ್ರಾಮ ಲೆಕ್ಕಾಧಿಕಾರಿಗಳು
ಕಂದಾಯ ನಿರೀಕ್ಷಕರು
ಗುರುತಿಸಬೇಕಾಗುತ್ತದೆ. ನಂತರ ಉಪವಿಭಾಗಾಧಿಕಾರಿಗಳು (Assistant Commissioner) ಪ್ರಕರಣವನ್ನು ಪರಿಶೀಲಿಸಿ, ಕಾಯ್ದೆ ಉಲ್ಲಂಘನೆಯಾಗಿರುವುದು ಸಾಬೀತಾದಲ್ಲಿ, ಪರಭಾರೆಯಾದ ಜಮೀನನ್ನು ಮೂಲ ಮಂಜೂರಿದಾರ ಅಥವಾ ಅವರ ವಾರಸುದಾರರ ಸ್ವಾಧೀನಕ್ಕೆ ಮರಳಿ ವಹಿಸಿ ಕೊಡಬೇಕಾಗುತ್ತದೆ.
ಪರಭಾರೆಯಾದ ಜಮೀನು ಗುರುತಿಸುವ ವಿಧಾನ
ಕಾಯ್ದೆಗೆ ವಿರುದ್ಧವಾಗಿ ಪರಭಾರೆಯಾದ ಜಮೀನುಗಳನ್ನು ಗುರುತಿಸಲು:
ಗ್ರಾಮದಲ್ಲಿನ ಎಸ್ಸಿ/ಎಸ್ಟಿ ಮಂಜೂರಾತಿ ಜಮೀನಿನ ವಿವರಗಳನ್ನು ಗೇಣಿ ಹಾಗೂ ಪಹಣಿ ಪತ್ರಿಕೆಗಳಿಂದ ಪರಿಶೀಲಿಸಲಾಗುತ್ತದೆ
ಪ್ರಸ್ತುತ ಸ್ವಾಧೀನದಲ್ಲಿರುವವರ ವಿವರಗಳನ್ನು ಸಂಗ್ರಹಿಸಲಾಗುತ್ತದೆ
ಸ್ಥಳೀಯ ವಿಚಾರಣೆ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ
ಭೂಮಂಜೂರಿ ವಹಿ ಆಧಾರದ ಮೇjಲೆ ಮೂಲ ಮಂಜೂರಿದಾರರ ವಿವರ ಪರಿಶೀಲಿಸಲಾಗುತ್ತದೆ
ಸಾಗುವಳಿ ಚೀಟಿ ಹಾಗೂ ಹಕ್ಕು ದಾಖಲೆಗಳ ಆಧಾರದ ಮೇಲೆ ಮಂಜೂರಾತಿಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ
ಪ್ರಕರಣ ತಯಾರಿ ಪ್ರಕ್ರಿಯೆ
ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ:
ಸ್ಥಳ ಪರಿಶೀಲನಾ ವರದಿ
ಪಂಚನಾಮೆ (ಮಹಜರ)
ಸಂಬಂಧಿಸಿದವರ ಹೇಳಿಕೆ
ಸಂಗ್ರಹಿಸಿ ಪ್ರಕರಣ ತಯಾರಿಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಲಾಗುತ್ತದೆ.
ಪ್ರಕರಣದೊಂದಿಗೆ:
ಗೇಣಿ ಪತ್ರಿಕೆ
ಚಕಬಂದಿ ವಿವರ
ನಕಾಶೆಯ ಪ್ರತಿ ಅಥವಾ ಕೈ ನಕಾಶೆ
ಲಗತ್ತಿಸಲಾಗುತ್ತದೆ.
ಉಪವಿಭಾಗಾಧಿಕಾರಿಗಳ ಆದೇಶದಂತೆ ಮತ್ತು ಯಾವುದೇ ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿದ್ದಲ್ಲಿ, ಜಮೀನನ್ನು ಮೂಲ ಮಂಜೂರಿದಾರರ ಸ್ವಾಧೀನಕ್ಕೆ ಹಸ್ತಾಂತರಿಸಿ ದಾಖಲೆಗಳನ್ನು ನವೀಕರಿಸಲಾಗುತ್ತದೆ.
ಮಾರಾಟಕ್ಕೆ ಅನುಮತಿ ನೀಡುವ ಸಂದರ್ಭ
ಸಾಮಾನ್ಯವಾಗಿ,
ಭೂಮಂಜೂರಿಯಾಗಿ 5 ವರ್ಷಗಳು ಪೂರ್ಣಗೊಂಡಿದ್ದಲ್ಲಿ,
ಮಾರಾಟ ಮೌಲ್ಯದ ಶೇಕಡಾ 50 ರಷ್ಟನ್ನು ಸರ್ಕಾರಕ್ಕೆ ಭರಣಾ (ಪಾವತಿ) ಮಾಡಿದಲ್ಲಿ,
ಸರ್ಕಾರದಿಂದ ಮಾರಾಟಕ್ಕೆ ಅನುಮತಿ ನೀಡುವ ಅವಕಾಶ ಇರುತ್ತದೆ.
ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಾಗ:
ಸಂಬಂಧಿಸಿದ ಎಲ್ಲಾ ದಾಖಲೆಗಳು
ಕುಟುಂಬದ ಆರ್ಥಿಕ ಸಂಕಷ್ಟದ ವಿವರ
ಖರೀದಿಸುವ ವ್ಯಕ್ತಿಯ ವಿವರ
ಖರೀದಿಯ ಉದ್ದೇಶ
ಕ್ರಯ ಮೊತ್ತ
ಇತ್ಯಾದಿಗಳನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕಾಗುತ್ತದೆ.







