ಔರಾದ್ ಪಟ್ಟಣದಲ್ಲಿ ವಾಸಿಸುತ್ತಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಕುಟುಂಬಗಳು ದಶಕಗಳಿಂದ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಬೀದಿ ಬದಿಗಳಲ್ಲೇ ತಾತ್ಕಾಲಿಕ ಗುಡಿಸಲುಗಳಲ್ಲಿ ಬದುಕು ಸಾಗಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಈಗಾಗಲೇ ಮಂಜೂರಾದ ನಿವೇಶನವನ್ನು ಕೂಡಲೇ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಅಹೋರಾತ್ರಿ ಧರಣಿ ಆರಂಭಿಸಲಾಯಿತು.
ಎಪಿಎಂಸಿ ಆವರಣದಿಂದ ತಹಸೀಲ್ದಾರ್ ಕಚೇರಿವರೆಗೆ ಮಹಿಳೆಯರು, ಮಕ್ಕಳು ತಮ್ಮ ಕಾಯಕದ ವೇಷಗಳೊಂದಿಗೆ ಮೆರವಣಿಗೆ ನಡೆಸಿ, ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು. ಬಳಿಕ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಸರ್ವೇ ನಂ.205ರಲ್ಲಿ 72 ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರತಿ ಮನೆಗೆ ₹15 ಲಕ್ಷ ಅನುದಾನ ದೊರೆಯಲಿದೆ ಎಂದು ತಿಳಿಸಿದರು. ಆದರೆ ಈ ಹಿಂದೆ ಸರ್ವೇ ನಂ.183ರಲ್ಲಿ ಮಂಜೂರಾದ 2 ಎಕರೆ ಜಾಗ ಇನ್ನೂ ಹಂಚಿಕೆ ಆಗದೆ ನನೆಗುದಿಗೆ ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಮೂರು ದಶಕಗಳಿಂದ ವಾಸಿಸುತ್ತಿರುವ 150ಕ್ಕೂ ಅಧಿಕ ಕುಟುಂಬಗಳಿಗೆ ಇನ್ನೂ ಸ್ವಂತ ಸೂರಿಲ್ಲದೆ ಬದುಕುತ್ತಿರುವುದು ದುರ್ಬಾಗ್ಯಕರ ಸಂಗತಿಯಾಗಿದೆ. ಭೂಮಿ ಹಾಗೂ ಮನೆ ದೊರೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಅಲೆಮಾರಿ ಸಮುದಾಯ ಸ್ಪಷ್ಟಪಡಿಸಿದ್ದು, ಮೊದಲ ದಿನದ ಅಹೋರಾತ್ರಿ ಧರಣಿ ಮುಂದುವರೆದಿದೆ.
ಪ್ರತಿಭಟನೆಯಲ್ಲಿ ಅಲೆಮಾರಿ ಸಮುದಾಯದ ಮುಖಂಡ ನಾಗನಾಥ ವಾಕೋಡೆ, ಬಿಎಸ್ಪಿ ಜಿಲ್ಲಾಧ್ಯಕ್ಷ ಕಪೀಲ್ ಗೋಡಬೊಲೆ, ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ದಿಲೀಪ ವರ್ಮಾ, ಸಿದ್ದಾರ್ಥ ಭೋಸ್ಲೆ, ಸಂತೋಷ ಸಿಂಧೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ಫಿರ್ದೋಷ್ ಪಟೇಲ್, ಸುಂದರ ಮೇತ್ರೆ, ಅಖಿಲೇಶ ಸಾಗರ, ಸುಭಾಷ ದಾಂಡೇಕರ್, ಬಸವರಾಜ ಕಾಂಬಳೆ, ಆನಂದ ಕಾಂಬಳೆ, ಉತ್ತಮ ಸುತಾರ್, ಸಂಪತ್ ಫೈಟರ್, ಪ್ರೇಮ್ ಗೋಡಬೊಲೆ, ರಾಜಶೇಖರ್ ಶೇರಿಕಾರ್ ಸೇರಿದಂತೆ ಅಲೆಮಾರಿ ಸಮುದಾಯದ ಅನೇಕರು ಭಾಗವಹಿಸಿದ್ದರು.









