ಔರಾದ: ಔರಾದ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನ ಹಿರಿಯ ಸಾಹಿತಿ, ಚಿಂತಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ. ಮನ್ಮತ ಡೋಳೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಮಹತ್ವದ ನಿರ್ಣಯದಿಂದ ತಾಲೂಕು ಸಾಹಿತ್ಯ ವಲಯದಲ್ಲಿ ಹರ್ಷ, ಸಂಭ್ರಮ ಮತ್ತು ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.
ಈ ಗೌರವಾನ್ವಿತ ಆಯ್ಕೆಯ ಹಿನ್ನೆಲೆಯಲ್ಲಿ ಇಂದು ಡಾ. ಮನ್ಮತ ಡೋಳೆ ಅವರ ಸ್ವಗೃಹದಲ್ಲಿ ಹರ್ಷಭರಿತ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ರಮೇಶ್ ಶೇಳ್ಕೆ, ಶಿವರಾಜ್ ಝಂಲಂಡೆ , ಪ್ರಕಾಶ್ ಭಂಗಾರೆ, ಪ್ರಜ್ವಲಿತ್ ಗೊಡಬೋಲೆ, ಸುಧಾಕರ್ ಸಕ್ತ್ಪಾಲ್, ಸುಂದರ ಮೆಹತ್ರೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು, ಡಾ. ಡೋಳೆ ಅವರಿಗೆ ಹಾರಾರ್ಪಣೆ ಮಾಡಿ, ಶಾಲು ಹೊದಿಸಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತಾಡಿದ ದಲಿತ ಹೋರಾಟಗಾರ ಯುವಾ ನೆತೆ ಶ್ರೀ ಪ್ರಕಾಶ್ ಭಂಗಾರೆ ಅವರು, “ಡಾ. ಮನ್ಮತ ಡೋಳೆ ಅವರ ಸಾಹಿತ್ಯ ಸೇವೆ ತಾಲೂಕು ಮಟ್ಟಕ್ಕೆ ಮಾತ್ರ ಸೀಮಿತವಾಗದೇ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರ ಸರ್ವಾಧ್ಯಕ್ಷತ್ವದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನವು ಹೊಸ ಆಯಾಮಗಳನ್ನು ಪಡೆದು, ಯುವ ಬರಹಗಾರರಿಗೆ ಪ್ರೇರಣೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಾ. ಮನ್ಮತ ಡೋಳೆ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, “ಕನ್ನಡ ಸಾಹಿತ್ಯದ ಬೆಳವಣಿಗೆಗೆ ನನ್ನಿಂದಾದಷ್ಟು ಸೇವೆ ಮುಂದುವರಿಸುತ್ತೇನೆ. ಈ ಗೌರವ ನನ್ನ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹಾಕಿದೆ. ಸಮ್ಮೇಳನವನ್ನು ಎಲ್ಲರ ಸಹಕಾರದಿಂದ ಅರ್ಥಪೂರ್ಣವಾಗಿ ನಡೆಸುವ ಪ್ರಯತ್ನ ಮಾಡುತ್ತೇನೆ” ಎಂದರು.







