Home » ರಾಜ್ಯ » 2026ರ ಬ್ಲಾಕ್ ಅವಧಿಗೆ ಗಳಿಕೆ ರಜೆ ನಗದೀಕರಣ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

2026ರ ಬ್ಲಾಕ್ ಅವಧಿಗೆ ಗಳಿಕೆ ರಜೆ ನಗದೀಕರಣ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು:
ರಾಜ್ಯ ಸರ್ಕಾರವು 2026ನೇ ಸಾಲಿನ ಬ್ಲಾಕ್ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯಮಿತಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಮಹತ್ವದ ಸೌಲಭ್ಯವನ್ನು ಸರ್ಕಾರ ಘೋಷಿಸಿದೆ.
ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿಯವರು ದಿನಾಂಕ 17-01-2025ರಂದು ಸರ್ಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ದಿನಾಂಕ 31-12-2025ರಂದು ಮುಕ್ತಾಯಗೊಳ್ಳುವ 2025ನೇ ಸಾಲಿನ ಬ್ಲಾಕ್ ಅವಧಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ನಿಯಮ 118(2)(i)ರನ್ವಯ ಗಳಿಕೆ ರಜೆ ಅಧ್ಯರ್ಪಿಸಿ ನಗದೀಕರಣ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಈ ಬ್ಲಾಕ್ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು 2026ನೇ ಸಾಲಿನ ಬ್ಲಾಕ್ ಅವಧಿಯಲ್ಲಿ ಗರಿಷ್ಠ 15 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ, ರಜೆ ವೇತನಕ್ಕೆ ಸಮಾನವಾಗಿ ನಗದೀಕರಣ ಪಡೆಯಲು ಅವಕಾಶ ನೀಡಲು ತೀರ್ಮಾನಿಸಿದೆ. ಈ ಸೌಲಭ್ಯವು ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ, ಸರ್ಕಾರದಿಂದ ಸಹಾಯಾನುದಾನ ಅಥವಾ ಅನುದಾನ ಪಡೆಯುವ ಹಾಗೂ ಪಡೆಯದಿರುವ ಕರ್ನಾಟಕ ಸರ್ಕಾರದ ಅಧೀನದ ಎಲ್ಲಾ ಸಂಸ್ಥೆಗಳು ಮತ್ತು ಉದ್ಯಮಗಳ ನೌಕರರಿಗೂ ಅನ್ವಯವಾಗಲಿದೆ. ಆದರೆ, ಈ ಸೌಲಭ್ಯವು ಸಂಬಂಧಿತ ಸಂಸ್ಥೆ ಅಥವಾ ಉದ್ಯಮಗಳ ಆರ್ಥಿಕ ಸ್ಥಿತಿಗೆ ಒಳಪಟ್ಟಿರುತ್ತದೆ.
1 ಜನವರಿ 2026ರಿಂದ ಜಾರಿ
ಸರ್ಕಾರದ ಆದೇಶದಂತೆ, ಗಳಿಕೆ ರಜೆ ನಗದೀಕರಣ ಸೌಲಭ್ಯವು ದಿನಾಂಕ 01-01-2026 ರಿಂದ 31-12-2026ರವರೆಗೆ ಜಾರಿಯಲ್ಲಿರುತ್ತದೆ. ಎಲ್ಲಾ ವೃಂದದ ಅರ್ಹ ಸರ್ಕಾರಿ ಅಧಿಕಾರಿ ಹಾಗೂ ನೌಕರರು ಈ ಅವಧಿಯಲ್ಲಿ ಯಾವುದೇ ಒಂದು ತಿಂಗಳನ್ನು ಆಯ್ಕೆ ಮಾಡಿಕೊಂಡು, ಗರಿಷ್ಠ 15 ದಿನಗಳ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಪಡೆಯಬಹುದು.
ಈ ಸೌಲಭ್ಯ ಪಡೆಯಲು ಅರ್ಹ ನೌಕರರು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಮನವಿ ಸಲ್ಲಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಬ್ಲಾಕ್ ಅವಧಿ ನಂತರವೂ ಆದೇಶಕ್ಕೆ ಅವಕಾಶ
ಯಾವುದೇ ಕಾರಣದಿಂದ ನಿಗದಿತ ಬ್ಲಾಕ್ ಅವಧಿಯೊಳಗೆ ಗಳಿಕೆ ರಜೆ ನಗದೀಕರಣಕ್ಕೆ ಸಂಬಂಧಿಸಿದ ಮಂಜೂರಾತಿ ಆದೇಶ ಹೊರಡಿಸಲಾಗದಿದ್ದಲ್ಲಿ, ಸಂಬಂಧಿತ ಪ್ರಾಧಿಕಾರವು ಬ್ಲಾಕ್ ಅವಧಿ ಮುಕ್ತಾಯಗೊಂಡ ನಂತರವೂ ಆದೇಶ ಹೊರಡಿಸಬಹುದಾಗಿದೆ. ಆದರೆ, ಅದರ ಆರ್ಥಿಕ ಪ್ರಯೋಜನವನ್ನು ಸಂಬಂಧಿತ ಆರ್ಥಿಕ ವರ್ಷ ಅಂತ್ಯಗೊಳ್ಳುವ ಮುನ್ನವೇ ಪಡೆಯಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಗೆಜೆಟೆಡ್ ಅಧಿಕಾರಿಗಳಿಗೆ ವಿಶೇಷ ಸೂಚನೆ
ಗೆಜೆಟೆಡ್ ಅಧಿಕಾರಿಗಳ ಗಳಿಕೆ ರಜೆ ನಗದೀಕರಣಕ್ಕೆ ಸಂಬಂಧಿಸಿದಂತೆ, 2026ನೇ ಸಾಲಿನ ಸೌಲಭ್ಯ ಮಂಜೂರಾತಿಗಾಗಿ ಹೆಚ್‌ಆರ್‌ಎಂಎಸ್ (HRMS) ನಲ್ಲಿ ಲಭ್ಯವಿರುವ ಗಳಿಕೆ ರಜೆ ಲೆಕ್ಕಾಚಾರದ ಆಧಾರದ ಮೇಲೆ ಮಾತ್ರ ನಗದೀಕರಣ ಮಂಜೂರು ಮಾಡಲು ಸಂಬಂಧಿತ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಹಾಲೇಖಪಾಲರು ಲೆಕ್ಕಾಚಾರದಲ್ಲಿ ಯಾವುದೇ ವ್ಯತ್ಯಾಸಗಳನ್ನು ಸೂಚಿಸಿದಲ್ಲಿ, ಅವುಗಳನ್ನು ಸರಿಪಡಿಸಿ, ತಿದ್ದುಪಡಿ ನಂತರ ಅರ್ಹವಾಗುವ ಆರ್ಥಿಕ ಸೌಲಭ್ಯಗಳನ್ನಷ್ಟೇ ಮಂಜೂರು ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಇತರೆ ಷರತ್ತುಗಳು ಅನ್ವಯ
ಇದಲ್ಲದೆ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 118ರಲ್ಲಿ ನಿಗದಿಪಡಿಸಿರುವ ಗಳಿಕೆ ರಜೆ ನಗದೀಕರಣಕ್ಕೆ ಸಂಬಂಧಿಸಿದ ಎಲ್ಲಾ ಇತರೆ ಷರತ್ತುಗಳು ಈ ಆದೇಶಕ್ಕೂ ಅನ್ವಯವಾಗುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಆದೇಶದಿಂದ 2026ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರು ಮತ್ತು ಸರ್ಕಾರದ ಅಧೀನ ಸಂಸ್ಥೆಗಳ ನೌಕರರಿಗೆ ಆರ್ಥಿಕವಾಗಿ ಸಹಾಯಕವಾಗುವ ಮಹತ್ವದ ಸೌಲಭ್ಯ ಲಭ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This