Home » ರಾಜ್ಯ » ಉದ್ಯೋಗ ಕಳೆದುಕೊಂಡ 6,650 ನಾನ್–ಯುಜಿಸಿ ಅತಿಥಿ ಉಪನ್ಯಾಸಕರು ಹೋರಾಟಕ್ಕೆ ಸಜ್ಜು

ಉದ್ಯೋಗ ಕಳೆದುಕೊಂಡ 6,650 ನಾನ್–ಯುಜಿಸಿ ಅತಿಥಿ ಉಪನ್ಯಾಸಕರು ಹೋರಾಟಕ್ಕೆ ಸಜ್ಜು

ಚಿತ್ರದುರ್ಗ | ಜ.11, 2026: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು ಎರಡು ದಶಕಗಳಿಂದ ಕಡಿಮೆ ವೇತನ, ಜೀವನ ಅಭದ್ರತೆ ಹಾಗೂ ಅಧಿಕ ಕಾರ್ಯಭಾರದೊಂದಿಗೆ ಸೇವೆ ಸಲ್ಲಿಸುತ್ತಿದ್ದ ನಾನ್–ಯುಜಿಸಿ ಅತಿಥಿ ಉಪನ್ಯಾಸಕರು ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತ್ತಿಪ್ಪತ್ತು ವರ್ಷಗಳ ಕಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಸುಮಾರು 6,650 ನಾನ್–ಯುಜಿಸಿ ಅತಿಥಿ ಉಪನ್ಯಾಸಕರು ತಮ್ಮ ಕೆಲಸವನ್ನೇ ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಅಂತಿಮ ಹೋರಾಟಕ್ಕೆ ಸಜ್ಜಾಗಿದ್ದು, ಜನವರಿ 16ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ.
ಈ ಸಂಬಂಧ ಶನಿವಾರ ಸಂಘದ ಪದಾಧಿಕಾರಿಗಳು ಬೆಂಗಳೂರು ಉಪ್ಪಾರಪೇಟೆ ಇನ್ಸ್‌ಪೆಕ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಮುಷ್ಕರಕ್ಕೆ ಅನುಮತಿ ನೀಡುವ ಜೊತೆಗೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಕೋರಿದ್ದಾರೆ.
ಅತಿಥಿ ಉಪನ್ಯಾಸಕರು ಮಾತನಾಡಿ, ಯುಜಿಸಿ ನಿಯಮಗಳನ್ನು ಪಾಲಿಸಬೇಕೆಂಬ ಹೈಕೋರ್ಟ್ ತೀರ್ಪಿನ ಬಳಿಕ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಷ್ಕರನಿರತ ಅಧ್ಯಾಪಕರಿಗೆ ನೀಡಿದ್ದ ಭರವಸೆಗಳು ಈಡೇರಿಲ್ಲ. ನೀಡಿದ್ದ ಭರವಸೆ ಹುಸಿಯಾಗಿರುವುದರಿಂದಲೇ ಈ ತೀವ್ರ ಹೋರಾಟದ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಜನವರಿ 1ರಂದು ಪೂರ್ಣಗೊಂಡಿದ್ದು, ಈ ಪ್ರಕ್ರಿಯೆಯಿಂದ ನಾನ್–ಯುಜಿಸಿ ಅತಿಥಿ ಉಪನ್ಯಾಸಕರನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ. ಇದರಿಂದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಉಪನ್ಯಾಸಕರು ಆತಂಕಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಈ ಬಾರಿ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮಗೆ ಜೀವನ ಭದ್ರತೆ ಒದಗಿಸಬೇಕು. ಉದ್ಯೋಗ ಕಾಯಂ ಮಾಡಬೇಕು. ಗೌರವಧನ ಹೆಚ್ಚಿಸಬೇಕು. ನಿವೃತ್ತಿ ನಂತರ ಇಡಿಗಂಟು (ಪಿಂಚಣಿ) ಸೌಲಭ್ಯ ನೀಡಬೇಕು. ಹೊಸ ನೇಮಕಾತಿಗಳಲ್ಲಿ ನಮಗೆ ಆದ್ಯತೆ ನೀಡಬೇಕು. ನಮ್ಮ ಈ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕು” ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This