Home » ಶಿಕ್ಷಣ » ಪಿಯುಸಿ ನಂತರ ಮುಂದೇನು? ವಿದ್ಯಾರ್ಥಿ–ಪಾಲಕರ ಗೊಂದಲಕ್ಕೆ ಮಾರ್ಗದರ್ಶಿ

ಪಿಯುಸಿ ನಂತರ ಮುಂದೇನು? ವಿದ್ಯಾರ್ಥಿ–ಪಾಲಕರ ಗೊಂದಲಕ್ಕೆ ಮಾರ್ಗದರ್ಶಿ

ವಿದ್ಯಾರ್ಥಿಗಳು–ಪಾಲಕರ ಗೊಂದಲಕ್ಕೆ ಮಾರ್ಗದರ್ಶಿ
ಪಿಯುಸಿ ಮುಗಿದ ಕೂಡಲೇ “ಆರ್ಟ್ಸ್‌, ಸೈನ್ಸ್‌, ಕಾಮರ್ಸ್‌… ಅಥವಾ ಎಐ?” ಎಂಬ ಪ್ರಶ್ನೆಗಳು ವಿದ್ಯಾರ್ಥಿಗಳನ್ನೂ ಪಾಲಕರನ್ನೂ ಗೊಂದಲಕ್ಕೆ ದೂಡುತ್ತವೆ. ಆಸಕ್ತಿ ಆಧಾರಿತ ಆಯ್ಕೆ ಮಾತ್ರ ಉಜ್ವಲ ಭವಿಷ್ಯಕ್ಕೆ ದಾರಿ ಎನ್ನುವುದು ತಜ್ಞರ ಅಭಿಪ್ರಾಯ.
ಪಿಯುಸಿ ಫಲಿತಾಂಶದ ಹೊಸ್ತಿಲಲ್ಲಿ ನಿಂತಿರುವ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ಆಯ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. “ಈ ಕೋರ್ಸ್‌ ಮಾಡು, ಆ ಕಾಲೇಜಿಗೆ ಸೇರು” ಎಂಬ ಸಲಹೆಗಳು ಎಲ್ಲೆಡೆಯಿಂದ ಬರುತ್ತವೆ. ಆದರೆ ವಿದ್ಯಾರ್ಥಿಯ ಆಸಕ್ತಿ, ಸಾಮರ್ಥ್ಯ ಮತ್ತು ದೀರ್ಘಕಾಲೀನ ಗುರಿಯನ್ನು ಪರಿಗಣಿಸದೇ ಆಯ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವುದು ಸಹಜ ಎಂದು ಶಿಕ್ಷಣ ತಜ್ಞರು ಎಚ್ಚರಿಸುತ್ತಾರೆ.
ಆಸಕ್ತಿಯೇ ಮುಖ್ಯ
ಪಿಯುಸಿ ನಂತರ ಪದವಿ ಅಥವಾ ವೃತ್ತಿಪರ ಕೋರ್ಸ್‌ ಆಯ್ಕೆ ಮಾಡುವಾಗ ವಿದ್ಯಾರ್ಥಿಯ ಆಸಕ್ತಿಯೇ ಮೊದಲ ಮಾನದಂಡವಾಗಬೇಕು. ಪಾಲಕರ ಒತ್ತಡ ಅಥವಾ ಸಮಾಜದ ಪ್ರಭಾವಕ್ಕೆ ಒಳಗಾಗಿ ಆಯ್ಕೆ ಮಾಡಿದ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಮಧ್ಯದಲ್ಲೇ ಕೈಬಿಡುವ ಉದಾಹರಣೆಗಳು ಹೆಚ್ಚಿವೆ. ಆದ್ದರಿಂದ ಸೂಕ್ತ ಮಾಹಿತಿ ಸಂಗ್ರಹಿಸಿ, ಕಾಲೇಜುಗಳಿಗೆ ಭೇಟಿ ನೀಡಿ ನಿರ್ಧಾರ ಕೈಗೊಳ್ಳಬೇಕು.
ಕಲಾ ವಿಭಾಗ: ಬಹುಮುಖ ಅವಕಾಶಗಳು
ಪಿಯುಸಿ ಕಲಾ ವಿಭಾಗದ ನಂತರ ವಿದ್ಯಾರ್ಥಿಗಳಿಗೆ ಬಿಎ (ಇಂಗ್ಲಿಷ್‌, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಭೂಗೋಳ, ತತ್ವಶಾಸ್ತ್ರ, ಸಂಗೀತ), ಬಿಎಎಲ್‌ಎಲ್‌ಬಿ, ಪತ್ರಿಕೋದ್ಯಮ, ಹೋಟೆಲ್ ಮ್ಯಾನೇಜ್‌ಮೆಂಟ್, ಫ್ಯಾಷನ್ ಡಿಸೈನ್, ಡಿಜಿಟಲ್ ಮಾರ್ಕೆಟಿಂಗ್, ಈವೆಂಟ್ ಮ್ಯಾನೇಜ್‌ಮೆಂಟ್, ಬಿಎಫ್‌ಎ, ಬಿಎಸ್‌ಡಬ್ಲ್ಯು, ಬಿಬಿಎ ಮೊದಲಾದ ಹಲವು ಆಯ್ಕೆಗಳಿವೆ.
ಉದ್ಯೋಗದ ದೃಷ್ಟಿಯಿಂದ ಪೊಲೀಸ್ ಕಾನ್‌ಸ್ಟೆಬಲ್, ಅಗ್ನಿವೀರ್‌, ರೈಲ್ವೆ ಗ್ರೂಪ್‌ ‘ಸಿ/ಡಿ’, ಬ್ಯಾಂಕ್ ಕ್ಲರ್ಕ್ ಹುದ್ದೆಗಳು ಲಭ್ಯ. ಖಾಸಗಿ ವಲಯದಲ್ಲಿ ಕಂಟೆಂಟ್ ರೈಟಿಂಗ್‌, ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್‌, ಗ್ರಾಫಿಕ್ ಡಿಸೈನ್‌ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ. ಬಿ.ಇಡಿ ಮಾಡಿ ಶಿಕ್ಷಕರಾಗುವ ದಾರಿಯೂ ಇದೆ.
ವಿಜ್ಞಾನ ವಿಭಾಗ: ಗೊಂದಲ ಹೆಚ್ಚಾದರೂ ಅವಕಾಶ ಅಪಾರ
ಪಿಯುಸಿ ವಿಜ್ಞಾನ ನಂತರ ಎಂಜಿನಿಯರಿಂಗ್‌ (ಬಿಇ/ಬಿಟೆಕ್‌), ವೈದ್ಯಕೀಯ (ಎಂಬಿಬಿಎಸ್‌, ಬಿಡಿಎಸ್‌), ಫಾರ್ಮಸಿ, ಕೃಷಿ, ಆರ್ಕಿಟೆಕ್ಚರ್‌, ಪ್ಯಾರಾಮೆಡಿಕಲ್‌, ಬಿಸಿಎ, ಬಿಎಸ್ಸಿ ಮೊದಲಾದ ಅನೇಕ ಮಾರ್ಗಗಳಿವೆ.
ಎಂಎಸ್‌ಐ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ನರೇಂದ್ರ ಬಡಶೇಷಿ ಹೇಳುವಂತೆ:
“ಗೊಂದಲ ಸಾಮಾನ್ಯವಾಗಿ ವಿಜ್ಞಾನ ವಿದ್ಯಾರ್ಥಿಗಳಲ್ಲೇ ಹೆಚ್ಚು. ಮೆಡಿಕಲ್‌ ಅಥವಾ ಎಂಜಿನಿಯರಿಂಗ್‌ ಸಿಗದಿದ್ದರೆ ಬೇಸಿಕ್ ಸೈನ್ಸ್‌ಸ್‌ ಉತ್ತಮ ಆಯ್ಕೆ. ಮುಂದೆ ಎಂಎಸ್‌ಸಿ, ಬಿ.ಇಡಿ ಮೂಲಕ ಉಪನ್ಯಾಸಕ ವೃತ್ತಿಗೂ ಅವಕಾಶ ಇದೆ.”
ಪ್ಯಾರಾಮೆಡಿಕಲ್‌, ಬಿ-ಫಾರ್ಮಾ, ಬಯೋಟೆಕ್ನಾಲಜಿ, ಕೃಷಿ, ಆಹಾರ ತಂತ್ರಜ್ಞಾನ, ಪರಿಸರ ವಿಜ್ಞಾನ, ನರ್ಸಿಂಗ್‌, ಫಿಸಿಯೋಥೆರಪಿ ಮೊದಲಾದ ಕ್ಷೇತ್ರಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ.
ವಾಣಿಜ್ಯ ವಿಭಾಗ: ಹಣಕಾಸು–ನಿರ್ವಹಣೆಯ ದಾರಿ
ವಾಣಿಜ್ಯ ವಿಭಾಗದ ನಂತರ ಬಿಕಾಂ, ಬಿಬಿಎ, ಸಿಎ, ಸಿಎಸ್‌, ಸಿಎಂಎ, ಎಲ್‌ಎಲ್‌ಬಿ ಮುಂತಾದ ಕೋರ್ಸ್‌ಗಳಿವೆ. ಬ್ಯಾಂಕಿಂಗ್‌, ಹಣಕಾಸು, ಆಡಿಟಿಂಗ್‌, ತೆರಿಗೆ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಉತ್ತಮ ವೃತ್ತಿ ಅವಕಾಶಗಳು ಲಭ್ಯ. ಸಿಎ ವೃತ್ತಿ ಅತ್ಯಂತ ಗೌರವಾನ್ವಿತ ಹಾಗೂ ಹೆಚ್ಚಿನ ವೇತನದ ವೃತ್ತಿಗಳಲ್ಲಿ ಒಂದಾಗಿದೆ.
ಎಐ – ಭವಿಷ್ಯದ ತಂತ್ರಜ್ಞಾನ
ಕೃತಕ ಬುದ್ಧಿಮತ್ತೆ (ಎಐ) ಇಂದು ಶಿಕ್ಷಣದಿಂದ ಆರೋಗ್ಯ, ಕೃಷಿಯಿಂದ ಸಾಫ್ಟ್‌ವೇರ್‌ವರೆಗೆ ವ್ಯಾಪಿಸಿದೆ. ಪಿಸಿಎಂ ವಿದ್ಯಾರ್ಥಿಗಳು ಬಿಇ/ಬಿಟೆಕ್‌ ಇನ್‌ ಎಐ & ಮಷಿನ್ ಲರ್ನಿಂಗ್‌, ಕಲಾ–ವಾಣಿಜ್ಯ ವಿದ್ಯಾರ್ಥಿಗಳು (ಗಣಿತ ಹಿನ್ನೆಲೆ ಇದ್ದರೆ) ಬಿಸಿಎ ಇನ್‌ ಎಐ, ಡೇಟಾ ಸೈನ್ಸ್‌ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು. ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳೂ ಲಭ್ಯವಿವೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ
ಐಐಟಿ, ಎನ್‌ಐಟಿ, ಜಿಎಫ್‌ಟಿಐಗಳಲ್ಲಿ ಪ್ರವೇಶಕ್ಕೆ ಜೆಇಇ (ಮೇನ್‌, ಅಡ್ವಾನ್ಸ್‌) ಅಗತ್ಯ. ವೈದ್ಯಕೀಯಕ್ಕೆ ನೀಟ್‌, ರಾಜ್ಯಮಟ್ಟದಲ್ಲಿ ಕೆ-ಸಿಇಟಿ ಮೂಲಕ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಸಿಗುತ್ತದೆ. ಕೆಲವು ಸರ್ಕಾರಿ ಸಂಸ್ಥೆಗಳು ಉಚಿತ ತರಬೇತಿ ಹಾಗೂ ಪ್ರೋತ್ಸಾಹ ಧನ ನೀಡುತ್ತಿವೆ.
ಕೊನೆಯ ಸಲಹೆ
ನಾನು ಮುಂದೆ ಏನಾಗಬೇಕು?” ಎಂಬ ಪ್ರಶ್ನೆಗೆ ಉತ್ತರ ಹುಡುಕಿ.
ಆಸಕ್ತಿ, ಸಾಮರ್ಥ್ಯ, ಆರ್ಥಿಕ ಪರಿಸ್ಥಿತಿ ಮತ್ತು ಉದ್ಯೋಗ ಅವಕಾಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಿ. ಕಾಲೇಜುಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದು ಪ್ರವೇಶ ಪಡೆಯುವುದೇ ಸೂಕ್ತ ಮಾರ್ಗ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This