ಬೆಂಗಳೂರು: ಅನುಕಂಪದ ಆಧಾರದ ಮೇಲೆ ಸರ್ಕಾರಿ ಸೇವೆಗೆ ನೇಮಕಾತಿ ಪರಿಗಣಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಸಿಂಧುತ್ವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕಾಗಿಲ್ಲ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಸಂಬಂಧ ಎಲ್ಲಾ ಇಲಾಖೆ ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಉಮೇಶ್ ಕುಮಾರ್ ನಾಗಪಾಲ್ ವಿರುದ್ಧ ಹರಿಯಾಣ ರಾಜ್ಯ ಮತ್ತು ಇತರರು (1994) 4 SCC 138 ಪ್ರಕರಣದಲ್ಲಿ ನೀಡಿದ ತೀರ್ಪಿನ ಹಿನ್ನೆಲೆ ಯಲ್ಲಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ರಚಿಸಲ್ಪಟ್ಟಿದ್ದು, ಈ ನಿಯಮಗಳು 13-09-1996ರಿಂದ ಜಾರಿಗೆ ಬಂದಿವೆ. ಈ ನಿಯಮಗಳಿಗೆ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದ್ದು, ಇತ್ತೀಚೆಗೆ ದಿನಾಂಕ 09-04-2021ರ ಅಧಿಸೂಚನೆಯ ಮೂಲಕ ವ್ಯಾಪಕ ತಿದ್ದುಪಡಿಗಳನ್ನು ಜಾರಿಗೆ ತರಲಾಗಿದೆ.
ಅನುಕಂಪದ ನೇಮಕಾತಿಯು ಸಾಮಾನ್ಯ ನೇರ ನೇಮಕಾತಿ ಪ್ರಕ್ರಿಯೆಯಿಂದ ಭಿನ್ನವಾದ ವಿಶೇಷ ನೇಮಕಾತಿ ವಿಧಾನವಾಗಿದ್ದು, ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರಂತೆ ಅನ್ವಯಿಸುವ ‘ಮೆರಿಟ್-ಕಮ್-ರಿಸರ್ವೇಷನ್’ ತತ್ವವು ಇಲ್ಲಿ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅನುಕಂಪದ ನೇಮಕಾತಿಯಲ್ಲಿ ಅಭ್ಯರ್ಥಿಯು ನಿಗದಿತ ವಿದ್ಯಾರ್ಹತೆಯನ್ನು ಹೊಂದಿದ್ದಾನೆಯೇ ಮತ್ತು ನಿಗದಿತ ವಯೋಮಿತಿಯೊಳಗಿದ್ದಾನೆಯೇ ಎಂಬುದನ್ನು ಮಾತ್ರ ಪರಿಗಣಿಸಬೇಕು; ಅಭ್ಯರ್ಥಿಗಳ ನಡುವಿನ ತಾತ್ಸಾರ ಅರ್ಹತೆ (relative merit)ಯನ್ನು ಪರಿಗಣಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
1996ರ ನಿಯಮಗಳ ನಿಯಮ 4(5)ರಂತೆ, ಅನುಕಂಪದ ಆಧಾರದ ಮೇಲೆ ನೇಮಕಾತಿ ನೇರ ನೇಮಕಾತಿ ರಿಕ್ತ ಸ್ಥಾನಗಳ ವಿರುದ್ಧವೇ ಮಾಡಬೇಕಾಗುತ್ತದೆ. ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ನೇರ ನೇಮಕಾತಿ ಮತ್ತು ಮುಂಬಡ್ತಿ ನಡುವಿನ ಅನುಪಾತವನ್ನು ನಿಗದಿಪಡಿಸಿದ್ದಲ್ಲಿ, ಆ ಅನುಪಾತಕ್ಕೆ ಅನುಗುಣವಾಗಿ ರಿಕ್ತ ಸ್ಥಾನಗಳನ್ನು ವರ್ಗೀಕರಿಸಿ, ನೇರ ನೇಮಕಾತಿಗೆ ಗುರುತಿಸಲಾದ ಸ್ಥಾನಗಳ ವಿರುದ್ಧ ಮಾತ್ರ ಅನುಕಂಪದ ನೇಮಕಾತಿಯನ್ನು ಪರಿಗಣಿಸಬೇಕಾಗಿದೆ. ಆದರೆ, ಇದರಿಂದ ಅನುಕಂಪದ ನೇಮಕಾತಿ ನೇರ ನೇಮಕಾತಿಯಾಗಿ ಪರಿಗಣಿಸಲ್ಪಡುವುದಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಇದಲ್ಲದೆ, ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿದವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೂ ಸಹ, ನೇಮಕಾತಿ ಹಂತದಲ್ಲಿ ಅವರಿಗೆ ಮೀಸಲಾತಿ ಸೌಲಭ್ಯ ಅನ್ವಯಿಸುವುದಿಲ್ಲ. ಆದಾಗ್ಯೂ, ಇಂತಹ ನೌಕರರು ಮುಂದಿನ ಹಂತದಲ್ಲಿ ಸಂವಿಧಾನದ ಅನುಚ್ಛೇದ 16(4-ಎ)ರಡಿ ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯ ಪ್ರಕಾರ ಮುಂಬಡ್ತಿಯ ಮೂಲಕ ಹುದ್ದೆ ಪಡೆಯಲು ಅರ್ಹರಾಗಿರುತ್ತಾರೆ. ಆ ಸಂದರ್ಭದಲ್ಲಿ ಮಾತ್ರ ಅವರು ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಅಭ್ಯರ್ಥಿಯು ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಇತರೆ ಎಲ್ಲಾ ರೀತಿಯಲ್ಲೂ ಅರ್ಹನಾಗಿದ್ದಲ್ಲಿ, ಕೇವಲ ಮೀಸಲಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರ ಇಲ್ಲ ಎಂಬ ಕಾರಣಕ್ಕೆ ಅವರ ಅರ್ಜಿಯನ್ನು ತಿರಸ್ಕರಿಸಬಾರದು ಎಂದು ಸರ್ಕಾರ ನಿರ್ದೇಶಿಸಿದೆ. ಈ ಸಂಬಂಧ ಎಲ್ಲಾ ಇಲಾಖೆಗಳು ಹಾಗೂ ನೇಮಕಾತಿ ಪ್ರಾಧಿಕಾರಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.










