Home » ರಾಜ್ಯ » ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಹುಲಿ ಹಾಗೂ ಮಾಂಸಾಹಾರಿ ಪ್ರಾಣಿಗಳ ಗಣತಿ ಆರಂಭ

ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಹುಲಿ ಹಾಗೂ ಮಾಂಸಾಹಾರಿ ಪ್ರಾಣಿಗಳ ಗಣತಿ ಆರಂಭ

ಬೆಂಗಳೂರು:
ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಸೋಮವಾರದಿಂದ (ಜ.5) ಹುಲಿ ಹಾಗೂ ಇತರೆ ಮಾಂಸಾಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ. ಹುಲಿ ಸಂರಕ್ಷಿತ ಧಾಮ ಸೇರಿದಂತೆ ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಈ ಗಣತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದರು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಾದ್ಯಂತ ಹುಲಿ ಅಂದಾಜು ಗಣತಿ ನಡೆಯುತ್ತಿದ್ದು, ಈಗ ನಡೆಯುತ್ತಿರುವುದು ಆರನೇ ಗಣತಿ ಆಗಿದೆ ಎಂದರು.
ಈ ಹಿಂದೆ 2006, 2010, 2014, 2018 ಮತ್ತು 2022ರಲ್ಲಿ ಹುಲಿ ಗಣತಿ ನಡೆಸಲಾಗಿತ್ತು. 2022ರ ಗಣತಿ ಪ್ರಕಾರ ರಾಜ್ಯದಲ್ಲಿ ಸುಮಾರು 563 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ರಾಜ್ಯವು ದೇಶದಲ್ಲೇ ಹುಲಿ ಸಂಖ್ಯೆಯಲ್ಲಿ 2ನೇ ಸ್ಥಾನ ಪಡೆದಿತ್ತು ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದ ಅರಣ್ಯ ಪ್ರದೇಶಗಳ ಪ್ರತಿಯೊಂದು ವಲಯದಲ್ಲಿರುವ ಎಲ್ಲ 38 ಅರಣ್ಯ ವಿಭಾಗಗಳ ಗಸ್ತುಗಳಲ್ಲಿ ಈ ಗಣತಿ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಕಳೆದ ಅಕ್ಟೋಬರ್–ಡಿಸೆಂಬರ್ ತಿಂಗಳಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಪ್ರತ್ಯೇಕವಾಗಿ ಹಾಗೂ ರಾಜ್ಯದ ಎಲ್ಲಾ 13 ಅರಣ್ಯ ವೃತ್ತಗಳ ಮುಂಚೂಣಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಮೂರು ಹಂತಗಳಲ್ಲಿ ಗಣತಿ
ಮೊದಲ ಹಂತದಲ್ಲಿ, ಮೂರು ದಿನಗಳ ಕಾಲ ರಾಜ್ಯದ ಎಲ್ಲ ಗಸ್ತು ಪ್ರದೇಶಗಳಲ್ಲಿ ಮೂರು ಜನರ ತಂಡಗಳು ಪ್ರತಿದಿನ ಸುಮಾರು 5 ಕಿಲೋಮೀಟರ್ ಕಾಡಿನಲ್ಲಿ ಸಂಚರಿಸಿ, ಹುಲಿ, ಚಿರತೆ ಸೇರಿದಂತೆ ಎಲ್ಲ ಮಾಂಸಾಹಾರಿ ಪ್ರಾಣಿಗಳ ಕಾಲು ಗುರುತು, ಲದ್ದಿ, ಪ್ರತ್ಯಕ್ಷ ದರ್ಶನ ಸೇರಿದಂತೆ ಅಗತ್ಯ ಮಾಹಿತಿಯನ್ನು ಕಲೆ ಹಾಕಲಿವೆ.
ಜನವರಿ 5 ರಿಂದ್ 17ರವರೆಗೆ ನಡೆಯುವ ಎರಡನೇ ಹಂತದ ಗಣತಿಯಲ್ಲಿ, ರಾಜ್ಯದ 14 ಅರಣ್ಯ ವಿಭಾಗಗಳಲ್ಲಿ ಪ್ರತಿ ತಂಡ ಕಾಡಿನಲ್ಲಿ ಸಂಚರಿಸಿ ಜಿಂಕೆ, ಕಡವೆ, ಕಾಡೆಮ್ಮೆ, ಕಾಡುಕೋಣ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳ ಸಾಕ್ಷಾತ್ ದರ್ಶನದ ಮಾಹಿತಿ ಸಂಗ್ರಹಿಸಲಿದೆ. ಇದರಿಂದ ಯಾವ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಬೇಕು ಎಂಬುದನ್ನು ನಿರ್ಧರಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಎನ್.ಟಿ.ಸಿ.ಎ.ಗೆ ನೋಡಲ್ ಅಧಿಕಾರಿ ನೇಮಕ
ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಅವರನ್ನು ಎನ್.ಟಿ.ಸಿ.ಎ.ಗೆ ನೋಡಲ್ ಅಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ಅವರು ಈ ಸಂಪೂರ್ಣ ಅಂದಾಜು ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಯಾವ ಪ್ರದೇಶದಲ್ಲಿ ಎಷ್ಟು ಹುಲಿ ಮತ್ತು ಇತರೆ ಮಾಂಸಾಹಾರಿ ಪ್ರಾಣಿಗಳಿವೆ, ಆ ವಿಭಾಗದಲ್ಲಿ ಎಷ್ಟು ಸಸ್ಯಾಹಾರಿ ಪ್ರಾಣಿಗಳಿವೆ ಎಂಬುದನ್ನು ಪಟ್ಟಿಮಾಡಿ, ಅರಣ್ಯದ ಧಾರಣಾ ಸಾಮರ್ಥ್ಯ (ಕ್ಯಾರಿಯಿಂಗ್ ಕ್ಯಪಾಸಿಟಿ) ಗುರುತಿಸಲು ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಇತ್ತೀಚೆಗೆ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಡಿನಿಂದ ನಾಡಿಗೆ ಬರುತ್ತಿರುವುದು ಕಂಡುಬರುತ್ತಿದ್ದು, ಈ ಬಾರಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಸಾಧ್ಯತೆ ಇದೆ. ಇದು ಈ ಗಣತಿಯಿಂದ ನಿಖರವಾಗಿ ತಿಳಿಯಲಿದೆ ಎಂದು ಅವರು ಹೇಳಿದರು.
2,300ಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್ ಅಳವಡಿಕೆ
ಮೂರನೇ ಹಂತದಲ್ಲಿ, ಎರಡನೇ ಹಂತದ ಸಮೀಕ್ಷೆಯಲ್ಲಿ ಕಲೆ ಹಾಕಲಾದ ದತ್ತಾಂಶದ ಆಧಾರದ ಮೇಲೆ ಸೂಕ್ತ ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗುವುದು. ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 2,230 ಕ್ಯಾಮೆರಾ ಟ್ರ್ಯಾಪ್‌ಗಳು ಲಭ್ಯವಿದ್ದು, ಈಗಾಗಲೇ ಸಮೀಕ್ಷೆ ಪ್ರಾರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕ್ಯಾಮೆರಾ ಟ್ರ್ಯಾಪ್ ವಿವರಗಳು ಹೀಗಿವೆ:
ನಾಗರಹೊಳೆ ಹುಲಿ ಮೀಸಲು ಪ್ರದೇಶ – 600
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ – 550
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ – 300
ಭದ್ರಾ ಹುಲಿ ಸಂರಕ್ಷಿತ ಪ್ರದೇಶ – 330
ಕಾಳಿ ಹುಲಿ ಸಂರಕ್ಷಿತ ಪ್ರದೇಶ – 450
ಹುಲಿ ಸಂರಕ್ಷಿತ ಪ್ರದೇಶದ ಹೊರಗೂ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲು ಕ್ರಮ ವಹಿಸಲಾಗಿದ್ದು, ಸಮೀಕ್ಷೆ ಪೂರ್ಣಗೊಂಡಿರುವ ಹತ್ತಿರದ ಹುಲಿ ಮೀಸಲು ಪ್ರದೇಶಗಳಿಂದ ಕ್ಯಾಮೆರಾಗಳನ್ನು ಪೂರೈಸಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ಮಾಹಿತಿ ನೀಡಿದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This