ಬಸವಕಲ್ಯಾಣ:
ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಮಕ್ಕಳ ರಕ್ಷಣೆಗೆ ಮಿಲಿಟ್ರಿ ಸಮವಸ್ತ್ರ ಧರಿಸಿದ ಮಹಿಳಾ ಪೊಲೀಸರ ತಂಡವಾದ ‘ಅಕ್ಕ ಪಡೆ’ ತ್ವರಿತ ಕಾರ್ಯಾಚರಣೆ ನಡೆಸಿ ಸಂಕಷ್ಟದಲ್ಲಿರುವವರನ್ನು ರಕ್ಷಿಸುವ ಮಹತ್ವದ ಹೊಣೆಗಾರಿಕೆ ವಹಿಸಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯಮಟ್ಟದ ಯೋಜನಾ ಸಲಹೆಗಾರರಾದ ಶೈನಿ ಪ್ರದೀಪ ಗುಂಟಿ ಹೇಳಿದರು.
ಅವರು ಭಾನುವಾರ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಅಕ್ಕ ಪಡೆಗೆ ಮೀಸಲಾದ ನಾಲ್ಕು ಚಕ್ರಗಳ (ಬೋಲೆರೋ ಮಾದರಿ) ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರ ನೇತೃತ್ವದಲ್ಲಿ ಅಕ್ಕ ಪಡೆ ರಚಿಸಲಾಗಿದ್ದು, ಈ ವ್ಯವಸ್ಥೆಗೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಮಹಿಳೆಯರ ಸಂರಕ್ಷಣೆಗೆ ಹಿಂದೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಅಕ್ಕ ಪಡೆ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಶೈನಿ ಪ್ರದೀಪ ಗುಂಟಿ ಶ್ಲಾಘಿಸಿದರು. ಬೀದರ್ ಜಿಲ್ಲೆಯ ನಂತರ ಇದೀಗ ಬಸವಕಲ್ಯಾಣದಲ್ಲೂ ಅಕ್ಕ ಪಡೆಗೆ ಬೋಲೆರೋ ಮಾದರಿಯ ವಿಶೇಷ ವಾಹನವನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿದ್ದು, ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಕಾರಣ ಇಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಬಾಲ್ಯವಿವಾಹ, ವಿದ್ಯಾರ್ಥಿನಿಯರ ಮೇಲಿನ ಕಾಮುಕರ ಕಾಟ, ಶಾಲಾ–ಕಾಲೇಜು ಆವರಣದಲ್ಲಿನ ರ್ಯಾಗಿಂಗ್, ತಂಬಾಕು ಮತ್ತು ಇತರೆ ಮಾದಕ ವಸ್ತುಗಳ ಬಳಕೆಗೆ ಒತ್ತಾಯಿಸುವ ದುಶ್ಚಟಗಳು ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಅಕ್ಕ ಪಡೆಯನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶೈನಿ ಪ್ರದೀಪ ಗುಂಟಿ ಅವರು,
“ಅಕ್ಕ ಅಂದರೆ ಭರವಸೆ,
ಅಕ್ಕ ಅಂದರೆ ರಕ್ಷಣೆ,
ಅಕ್ಕ ಅಂದರೆ ಧೈರ್ಯ,
ಅಕ್ಕ ಅಂದರೆ ಆಸರೆ”
ಎಂಬ ಧ್ಯೇಯ ವಾಕ್ಯವನ್ನು ಮಕ್ಕಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸಿಪಿಐ ಅಲಿಸಾಬ್, ಸಿಡಿಪಿಒ ಗೌತಮ ಶಿಂಧೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಮಣಿ ಮಠಪತಿ ಮಾತನಾಡಿದರು. ನಗರಸಭೆ ಆಯುಕ್ತ ರಾಜೀವ ಬಣಕಾರ್, ಸಬ್ ಇನ್ಸ್ಪೆಕ್ಟರ್ಗಳಾದ ಚಂದ್ರಶೇಖರ ನಾರಾಯಣಪುರೆ, ಸುರೇಶ್ ಹಜ್ಜರಗಿ, ಸಿದ್ದೇಶ್ವರ, ಸುಜಾತಾ, ಸುವರ್ಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಅಕ್ಕ ಪಡೆಯಿಂದ ರಕ್ಷಣಾ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಅನೇಕ ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಿದರು. ನಾಲ್ಕು ಚಕ್ರಗಳ ವಿಶೇಷ ವಾಹನದ ಮೂಲಕ ನಗರದಲ್ಲಿ ನಿರಂತರ ಪೆಟ್ರೋಲಿಂಗ್ ನಡೆಸಿ ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆ ಒದಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.







