ಬೀದರ್ :ಬೀದರ್ ತಾಲ್ಲೂಕಿನ ಶಹಾಪುರ ಗ್ರಾಮದಲ್ಲಿನ ಕನಕದಾಸ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯೆಯರು ಉಳಿತಾಯಕ್ಕೆ ಮಾತ್ರ ಸೀಮಿತವಾಗದೆ, ಗೋಡಂಬಿ ಸಂಸ್ಕರಣೆ ಹಾಗೂ ಮಾರಾಟದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಗುಂಪು ಆರಂಭಿಸಿದ ಗೋಡಂಬಿ ಸಂಸ್ಕರಣ ಘಟಕದಿಂದ ತಿಂಗಳಿಗೆ ಸರಾಸರಿ ₹12 ಸಾವಿರದಂತೆ ವಾರ್ಷಿಕ ₹1.44 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಸಂಸ್ಕರಿಸಿದ ಗುಣಮಟ್ಟದ ಗೋಡಂಬಿಯನ್ನು ಆಕರ್ಷಕವಾಗಿ ಪ್ಯಾಕಿಂಗ್ ಮಾಡಿ ಬೀದರ್ ನಗರದ ಮಾರುಕಟ್ಟೆ, ಜಾತ್ರೆ, ಉತ್ಸವ ಹಾಗೂ ವಿವಿಧ ಮೇಳಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಗುಣಮಟ್ಟದ ಕಾರಣದಿಂದ ಗ್ರಾಹಕರು ನೇರವಾಗಿ ಸಂಪರ್ಕಿಸಿ ಗೋಡಂಬಿ ಖರೀದಿಸುತ್ತಿರುವುದು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಿಸುವ ಗುರಿಯನ್ನೂ ಗುಂಪು ಹೊಂದಿದೆ.
ತೋಟಗಾರಿಕೆ ಇಲಾಖೆಯ ಸಹಾಯಧನದ ಮೂಲಕ 2021ರಲ್ಲಿ ಶಹಾಪುರದಲ್ಲಿ ಶೆಡ್ ನಿರ್ಮಿಸಿ ಗೋಡಂಬಿ ಸಂಸ್ಕರಣ ಘಟಕ ಸ್ಥಾಪಿಸಲಾಗಿದೆ. ಪ್ರಸ್ತುತ ದಿನಕ್ಕೆ ಸುಮಾರು 1.5 ಕ್ವಿಂಟಲ್ ಗುಣಮಟ್ಟದ ಗೋಡಂಬಿ ಉತ್ಪಾದಿಸಲಾಗುತ್ತಿದೆ ಎಂದು ಗುಂಪಿನ ಅಧ್ಯಕ್ಷೆ ರೇಣುಕಾ ಗೋಪಾಲ ಮಲ್ಕಾಪುರೆ ಮಾಹಿತಿ ನೀಡುತ್ತಾರೆ.
ಆರಂಭದಲ್ಲಿ ಹ್ಯಾಂಡ್ ಕಟ್ಟಿಂಗ್ ಯಂತ್ರ ಹಾಗೂ ಡ್ರೈಯರ್ ಯಂತ್ರ ಬಳಸಿಕೊಂಡು ದಿನಕ್ಕೆ ಕೇವಲ 20ರಿಂದ 50 ಕೆ.ಜಿ. ಗೋಡಂಬಿ ಸಂಸ್ಕರಣೆ ಮಾಡಲಾಗುತ್ತಿತ್ತು. ನಂತರ ಘಟಕದಿಂದ ಬಂದ ಆದಾಯ ಹಾಗೂ ಉಳಿತಾಯದ ಹಣದಿಂದ ಸ್ವಯಂಚಾಲಿತ (ಆಟೊಮೆಟಿಕ್) ಕಟ್ಟಿಂಗ್ ಯಂತ್ರವನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯದ ಸ್ವಯಂಚಾಲಿತ ಯಂತ್ರ ಖರೀದಿಸುವ ಯೋಜನೆಯಿದೆ ಎಂದು ಅವರು ತಿಳಿಸಿದ್ದಾರೆ.
ರೈತರಿಂದ ಗೋಡಂಬಿಯನ್ನು ಖರೀದಿಸಿ ಸಂಸ್ಕರಿಸಿದ ಬಳಿಕ ಅರ್ಧ ಕೆ.ಜಿ., ಒಂದು ಕೆ.ಜಿ., 5 ಕೆ.ಜಿ. ಹಾಗೂ 10 ಕೆ.ಜಿ. ಪ್ಯಾಕ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಗೋಡಂಬಿಯನ್ನು ಮೂರು ಗುಣಮಟ್ಟಗಳಲ್ಲಿ ವಿಂಗಡಿಸಿದ್ದು, ಪ್ರಥಮ ದರ್ಜೆ ಗೋಡಂಬಿ ಕೆ.ಜಿ.ಗೆ ₹850, ದ್ವಿತೀಯ ದರ್ಜೆ ₹720 ಹಾಗೂ ತೃತೀಯ ದರ್ಜೆ ಗೋಡಂಬಿ ಕೆ.ಜಿ.ಗೆ ₹650 ರಂತೆ ಮಾರಾಟವಾಗುತ್ತಿದೆ.
15 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಸ್ವಸಹಾಯ ಗುಂಪಿನಲ್ಲಿ ಒಟ್ಟು 12 ಸದಸ್ಯೆಯರಿದ್ದಾರೆ. ಪ್ರತಿ ಸದಸ್ಯೆ ವಾರಕ್ಕೆ ₹20 ಉಳಿತಾಯ ಮಾಡುತ್ತಾ ಬಂದಿದ್ದು, ಅದರಿಂದ ಅವಶ್ಯಕತೆ ಇರುವ ಸದಸ್ಯರಿಗೆ ಸಾಲ ನೀಡಲಾಗುತ್ತಿದೆ. ಐದು ವರ್ಷಕ್ಕೆ ಒಮ್ಮೆ ಉಳಿತಾಯ ಹಾಗೂ ಆದಾಯವನ್ನು ಹಂಚಿಕೊಳ್ಳುವ ವ್ಯವಸ್ಥೆಯಿದೆ.
ಗೋಡಂಬಿ ಸಂಸ್ಕರಣ ಘಟಕದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ₹6 ಲಕ್ಷಕ್ಕೂ ಅಧಿಕ ಆದಾಯ ಲಭಿಸಿದ್ದು, ಗುಂಪಿನ ಸದಸ್ಯೆಯರ ಬದುಕಿಗೆ ಇದು ಮಹತ್ವದ ಆರ್ಥಿಕ ಬೆಂಬಲವಾಗಿದೆ. ಈ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ ಅವರು, ಕನಕದಾಸ ಮಹಿಳಾ ಸ್ವಸಹಾಯ ಗುಂಪಿನ ಸಾಧನೆಯನ್ನು ಶ್ಲಾಘಿಸಿ, ಇತರೆ ಸ್ವಸಹಾಯ ಗುಂಪುಗಳೂ ಇಂತಹ ಆದಾಯ ತರುವ ವಿನೂತನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.







