ಬೆಂಗಳೂರು:
ಆನ್ಲೈನ್ ಬಯೋಮೆಟ್ರಿಕ್ ನೋಂದಣಿಗೊಳ್ಳದೇ ಇರುವ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಹಾಗೂ ಯೋಗ ವೈದ್ಯ ವೃತ್ತಿ ನಿರತರಿಗೆ 2026ರ ಮಾರ್ಚ್ 30ರವರೆಗೆ ಆನ್ಲೈನ್ ಬಯೋಮೆಟ್ರಿಕ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಪ್ರಕಟಣೆ ಹೊರಡಿಸಿದೆ.
ಮಂಡಳಿಯು 2013ರಿಂದಲೇ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಹಾಗೂ ಯೋಗ ವೈದ್ಯರ ನೋಂದಣಿಯನ್ನು ಆನ್ಲೈನ್ ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ಆರಂಭಿಸಿದೆ. 2013ರ ಹಿಂದಿನ ಅವಧಿಯಲ್ಲಿ ಮಂಡಳಿಯಲ್ಲಿ ನೋಂದಣಿಗೊಂಡಿರುವ ವೈದ್ಯರುಗಳಿಗೆ ಈಗಾಗಲೇ ಹಲವು ಬಾರಿ ಆನ್ಲೈನ್ ಬಯೋಮೆಟ್ರಿಕ್ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆದರೂ ಇನ್ನೂ ಕೆಲವು ವೈದ್ಯರು ನೋಂದಣಿಗೊಳ್ಳದೆ ಉಳಿದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಂತಿಮ ಅವಕಾಶ ನೀಡಲಾಗಿದೆ.
ಮಂಡಳಿಯ ಪ್ರಕಟಣೆಯ ಪ್ರಕಾರ, ಆನ್ಲೈನ್ ಬಯೋಮೆಟ್ರಿಕ್ ನೋಂದಣಿಗೆ ಸಂಬಂಧಿಸಿದ ಸಾಫ್ಟ್ವೇರ್ ಅನ್ನು ವೈದ್ಯರ ಅನುಕೂಲಕ್ಕಾಗಿ ಹಂತ ಹಂತವಾಗಿ ಉನ್ನತೀಕರಿಸಲಾಗುತ್ತಿದೆ. ಸಾಫ್ಟ್ವೇರ್ ಉನ್ನತೀಕರಣ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಯೋಮೆಟ್ರಿಕ್ ನೋಂದಣಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
ನಿಗದಿತ ಅವಧಿಯೊಳಗೆ ಬಯೋಮೆಟ್ರಿಕ್ ನೋಂದಣಿಗೊಳ್ಳದೇ ವೈದ್ಯ ವೃತ್ತಿಯನ್ನು ಮುಂದುವರಿಸುವ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿಯ ನೋಂದಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಎಲ್ಲಾ ಅರ್ಹ ವೈದ್ಯರುಗಳು ಕಡ್ಡಾಯವಾಗಿ 2026ರ ಮಾರ್ಚ್ 30ರ ಒಳಗಾಗಿ ಆನ್ಲೈನ್ ಬಯೋಮೆಟ್ರಿಕ್ ನೋಂದಣಿಗೊಳ್ಳುವಂತೆ ಮನವಿ ಮಾಡಿದ್ದಾರೆ.







