ಔರಾದ್ :ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಧುನಿಕ ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಅವರ ಸ್ಮರಣಾರ್ಥವಾಗಿ ಕಂಪ್ಯೂಟರ್ ಆಪರೇಟರ್ ದಿನವನ್ನು ಬುಧವಾರ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (ಇಒ) ಕಿರಣ ಪಾಟೀಲ ಚಾಲನೆ ನೀಡಿದರು. ಅವರು ಚಾರ್ಲ್ಸ್ ಬ್ಯಾಬೇಜ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, “ಜನರಿಗೆ ತ್ವರಿತ ಹಾಗೂ ಸುಲಭ ಸೇವೆ ಒದಗಿಸುವ ಉದ್ದೇಶದಿಂದ ಸರ್ಕಾರ ಎಲ್ಲ ಹಂತಗಳಲ್ಲೂ ಕಂಪ್ಯೂಟರ್ ಬಳಕೆಗೆ ಅವಕಾಶ ಕಲ್ಪಿಸಿದೆ. ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜನಸ್ನೇಹಿ ಆಡಳಿತವನ್ನು ರೂಪಿಸಬೇಕು” ಎಂದು ಸಲಹೆ ನೀಡಿದರು.
ಇನ್ನೂ ಅವರು, “ಸರ್ಕಾರಿ ನೌಕರರು ಹಾಗೂ ಕಂಪ್ಯೂಟರ್ ಆಪರೇಟರ್ಗಳು ಕೇವಲ ಉದ್ಯೋಗದ ದೃಷ್ಟಿಯಿಂದ ಕೆಲಸ ಮಾಡಬಾರದು. ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮಾನವೀಯ ನೆಲೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು” ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, “ಗ್ರಾಮ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಆಪರೇಟರ್ಗಳ ಸೇವೆ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರನ್ನು ವಿನಾಕಾರಣ ತಿರುಗಿಸದೆ, ಅವರ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವ ಮೂಲಕ ವಿಶ್ವಾಸ ಗಳಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ಪಾಟೀಲ ಹಾಗೂ ವಿವೇಕ ಸ್ವಾಮಿ ಮಾತನಾಡಿ, ಕಂಪ್ಯೂಟರ್ ಆಪರೇಟರ್ಗಳ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಸಂಜುಕುಮಾರ, ಭೀಮರಾವ ರಾಠೋಡ್ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒಗಳು) ಹಾಗೂ ಕಂಪ್ಯೂಟರ್ ಆಪರೇಟರ್ಗಳು ಹಾಜರಿದ್ದರು.







