ಭಾಲ್ಕಿ :ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಸಿದ್ಧರಾಮೇಶ್ವರ ‘ನಮ್ಮೂರ 13ನೇ ಜಾತ್ರಾ ಮಹೋತ್ಸವ’ವನ್ನು ಜನವರಿ 1ರಿಂದ 11ರವರೆಗೆ ವಿಜೃಂಭಣೆಯಿಂದ ಆಯೋಜಿಸಲಾಗಿದೆ.
ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ರಾಚೋಟೇಶ್ವರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆಯಲಿವೆ. ಸಂಜೆ 6 ಗಂಟೆಗೆ ಮಹಿಳೆಯರಿಂದ ಸಿದ್ಧರಾಮೇಶ್ವರರು ತೋಡಿದ ಬಾವಿಗೆ ಗಂಗಾ ಪೂಜೆ ನೆರವೇರಿಸಲಾಗುವುದು. ಸಂಜೆ 7.30 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಆಳಂದ ತಾಲ್ಲೂಕಿನ ಹಿತ್ತಲಶಿರೂರಿನ ಶರಣಕುಮಾರ ಶಾಸ್ತ್ರಿ ಅವರಿಂದ ಜೀವನ ದರ್ಶನ ಪ್ರವಚನ ನಡೆಯಲಿದ್ದು, ನಂತರ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಹಾಗೂ ಗುರುವಿನ ತುಲಾಭಾರ ಕಾರ್ಯಕ್ರಮ ಜರುಗಲಿದೆ.
ಜನವರಿ 1ರಂದು ರಾತ್ರಿ 8.30 ಗಂಟೆಗೆ ಸಂಸದ ಸಾಗರ ಖಂಡ್ರೆ ಅವರು ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಸೊಂತದ ಶಂಕರಲಿಂಗ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಹಣೆಗಾಂವ್ನ ಶಂಕರಲಿಂಗ ಶಿವಾಚಾರ್ಯರು ಹಾಗೂ ಕೌಳಾಸದ ಬಸವಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಲಿದ್ದಾರೆ. ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ಭಕ್ತಾದಿಗಳು ಭಾಗವಹಿಸಲಿದ್ದಾರೆ. ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಿದ್ಧರಾಮೇಶ್ವರ ‘ನಮ್ಮೂರ 13ನೇ ಜಾತ್ರಾ ಮಹೋತ್ಸವ’ವನ್ನು ಯಶಸ್ವಿಗೊಳಿಸಬೇಕು ಎಂದು ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮನವಿ ಮಾಡಿದ್ದಾರೆ.







