ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಳು ಮುಕ್ತಾಯಗೊಂಡಿರುವ ಬೆನ್ನಲ್ಲೇ ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳ ಗಮನ ಸಂಪೂರ್ಣವಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯತ್ತ ನೆಟ್ಟಿದೆ. ಈಗಾಗಲೇ ಬಿಸಿಸಿಐ ಕಿವೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು, ಅದೇ ತಂಡ ಮುಂದಿನ 2026ರ ಟಿ20 ವಿಶ್ವಕಪ್‌ನಲ್ಲಿಯೂ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದರೆ, 2027ರ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ಮುಂಬರಲಿರುವ ಪ್ರತಿಯೊಂದು ODI ಸರಣಿಯನ್ನೂ ಬಿಸಿಸಿಐ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದು, ಅದೇ ನಿಟ್ಟಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಚಿಂತನೆ ನಡೆಸುತ್ತಿದೆ.
ಪಂತ್ ಔಟ್, ಇಶಾನ್ ಇನ್?
ನ್ಯೂಜಿಲ್ಯಾಂಡ್ ವಿರುದ್ಧದ ODI ಸರಣಿಗೆ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಸ್ಥಾನದಲ್ಲಿ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕೆಎಲ್ ರಾಹುಲ್ ಅವರಿಗೆ ಬ್ಯಾಕ್‌ಅಪ್ ಆಯ್ಕೆಯಾಗಿ ತಂಡದಲ್ಲಿದ್ದ ಪಂತ್ ಇದೀಗ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಗಮನಾರ್ಹ ಸಂಗತಿ ಎಂದರೆ, 2025ರ ವರ್ಷದಲ್ಲಿ ರಿಷಭ್ ಪಂತ್ ಒಂದೇ ಒಂದು ಏಕದಿನ ಪಂದ್ಯವನ್ನೂ ಆಡಿಲ್ಲ. ಇದರ ಬೆನ್ನಲ್ಲೇ ಆಯ್ಕೆ ಸಮಿತಿಯು ಇಶಾನ್ ಕಿಶನ್ ಕಡೆಗೆ ಒಲವು ತೋರಿದೆ ಎನ್ನಲಾಗುತ್ತಿದೆ.
ಇಶಾನ್ ಕಿಶನ್ ಎರಡು ವರ್ಷಗಳ ಕಾಲ ಏಕದಿನ ತಂಡದಿಂದ ಹೊರಗುಳಿದಿದ್ದರೂ, ಇತ್ತೀಚೆಗೆ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಟಿ20I ತಂಡಕ್ಕೆ ಮರಳಿದ್ದರು. ಇದೀಗ ODI ತಂಡದ ಬಾಗಿಲು ಕೂಡ ಮತ್ತೆ ತೆರೆಯುವ ಸೂಚನೆಗಳು ಸಿಕ್ಕಿವೆ.
ಗಾಯಕ್ವಾಡ್‌ಗೆ ಅವಕಾಶ, ಅಯ್ಯರ್ ಕಂಬ್ಯಾಕ್?
2027ರ ವಿಶ್ವಕಪ್ ದೃಷ್ಟಿಯಿಂದ ಈಗಲೇ ತಂಡವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿರುವ ಬಿಸಿಸಿಐ, ಯುವ ಆಟಗಾರರಿಗೆ ಅವಕಾಶ ನೀಡಲು ಮುಂದಾಗಿದೆ. ಅದರ ಭಾಗವಾಗಿ ರುತುರಾಜ್ ಗಾಯಕ್ವಾಡ್‌ಗೆ ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆ ಇದೆ. ಸ್ಥಿರ ಬ್ಯಾಟಿಂಗ್ ಆಯ್ಕೆ ರೂಪಿಸುವ ನಿಟ್ಟಿನಲ್ಲಿ ಗಾಯಕ್ವಾಡ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಆಲೋಚನೆ ಇದೆ.
ಇತ್ತ, ಉಪನಾಯಕ ಶ್ರೇಯಸ್ ಅಯ್ಯರ್ ನೆಟ್ ಪ್ರ್ಯಾಕ್ಟಿಸ್ ಆರಂಭಿಸಿರುವುದು ತಂಡಕ್ಕೆ ಮರಳುವ ಸೂಚನೆ ನೀಡಿದೆ. ಅಯ್ಯರ್ ಕಂಬ್ಯಾಕ್ ಆದರೆ ಪ್ಲೇಯಿಂಗ್ XI ಬಹುತೇಕ ಖಚಿತವಾಗಲಿದ್ದು, ಅಂಥ ಸಂದರ್ಭದಲ್ಲಿ ಗಾಯಕ್ವಾಡ್ ಮತ್ತೆ ಬೆಂಚ್‌ಗೆ ಸೀಮಿತವಾಗುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ, ಈ ಸರಣಿಯಲ್ಲಿ ಬಿಸಿಸಿಐ ಹಲವು ಪ್ರಯೋಗಗಳ ಮೂಲಕ 2027ರ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಸಿದ್ಧಗೊಳಿಸಲು ಮುಂದಾಗಿದೆ ಎನ್ನುವುದು ಸ್ಪಷ್ಟವಾಗಿದೆ.
ನ್ಯೂಜಿಲ್ಯಾಂಡ್ ವಿರುದ್ಧ ODI ಸರಣಿಗೆ ಭಾರತದ ಸಂಭಾವ್ಯ ತಂಡ
ಶುಭ್ಮನ್ ಗಿಲ್ (ನಾಯಕ)
ಶ್ರೇಯಸ್ ಅಯ್ಯರ್ (ಉಪನಾಯಕ)
ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ಯಶಸ್ವಿ ಜೈಸ್ವಾಲ್
ಕೆಎಲ್ ರಾಹುಲ್ (ವಿಕೆಟ್ ಕೀಪರ್)
ಇಶಾನ್ ಕಿಶನ್ (ವಿಕೆಟ್ ಕೀಪರ್)
ರುತುರಾಜ್ ಗಾಯಕ್ವಾಡ್
ನಿತೀಶ್ ಕುಮಾರ್ ರೆಡ್ಡಿ
ರವೀಂದ್ರ ಜಡೇಜಾ
ವಾಷಿಂಗ್ಟನ್ ಸುಂದರ್
ಅರ್ಷದೀಪ್ ಸಿಂಗ್
ಕುಲ್ದೀಪ್ ಯಾದವ್
ಹರ್ಷಿತ್ ರಾಣಾ
ಮೊಹಮ್ಮದ್ ಸಿರಾಜ್
ಭಾರತ vs ನ್ಯೂಜಿಲ್ಯಾಂಡ್ ODI ಸರಣಿ ವೇಳಾಪಟ್ಟಿ
ಮೊದಲ ODI – ಜನವರಿ 11 | ವಡೋದರಾ | ಮಧ್ಯಾಹ್ನ 1:30
ಎರಡನೇ ODI – ಜನವರಿ 14 | ರಾಜ್‌ಕೋಟ್ | ಮಧ್ಯಾಹ್ನ 1:30
ಮೂರನೇ ODI – ಜನವರಿ 18 | ಇಂದೋರ್ | ಮಧ್ಯಾಹ್ನ 1:30







