Home » ರಾಜಕೀಯ » ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಅಸಮಾಧಾನದ ಬೆಂಕಿ:ವಿಜಯೇಂದ್ರ ಹೇಳಿಕೆಯಿಂದ ಉಂಟಾದ ಬಿರುಕು

ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಅಸಮಾಧಾನದ ಬೆಂಕಿ:ವಿಜಯೇಂದ್ರ ಹೇಳಿಕೆಯಿಂದ ಉಂಟಾದ ಬಿರುಕು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಓಟಕ್ಕೆ ಲಗಾಮು ಹಾಕುವ ಏಕೈಕ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ಒಂದಾಗಿದ್ದ ಬಿಜೆಪಿ–ಜೆಡಿಎಸ್ ಮೈತ್ರಿಕೂಟದಲ್ಲಿ ಇದೀಗ ಗಂಭೀರ ಬಿರುಕು ಕಾಣಿಸಿಕೊಂಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವಂತೆಯೇ, ‘ತಾನೊಂದು ತೀರ, ನೀನೊಂದು ತೀರ’ ಎಂಬ ಹಂತಕ್ಕೆ ಉಭಯ ಪಕ್ಷಗಳು ಬಂದು ನಿಂತಿದ್ದು, ಮೈತ್ರಿ ಮುರಿತದ ಸೂಚನೆಗಳು ಸ್ಪಷ್ಟವಾಗುತ್ತಿವೆ.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ನೀಡಿದ ನೇರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಅಳೆದು ತೂಗಿ ಮಾತನಾಡುವ ಗೌಡರ ಈ ದಿಢೀರ್ ಘೋಷಣೆಯ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ವಿಜಯೇಂದ್ರ ಹೇಳಿಕೆಗೆ ಜೆಡಿಎಸ್ ಅಸಮಾಧಾನ
ಈ ಬಾರಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ” ಎಂಬ ವಿಜಯೇಂದ್ರ ಅವರ ಹೇಳಿಕೆಯನ್ನು ಜೆಡಿಎಸ್ ನಾಯಕರು ಮೈತ್ರಿ ಧರ್ಮಕ್ಕೆ ವಿರುದ್ಧವೆಂದು ಪರಿಗಣಿಸಿದ್ದಾರೆ. ಮೈತ್ರಿಯಲ್ಲಿದ್ದಾಗ ಪಾಲುದಾರ ಪಕ್ಷವನ್ನು ಕಡೆಗಣಿಸಿ ಸ್ವಬಲದ ರಾಜಕೀಯದ ಮಾತನಾಡಿದ್ದು ದೇವೇಗೌಡರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಜೆಡಿಎಸ್ ವಲಯದಲ್ಲಿ, “ಬಿಹಾರದಲ್ಲಿ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಯಲ್ಲಿದ್ದಾಗಲೂ ಜೆಡಿಯು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ ಎಂದು ಎಂದಿಗೂ ಹೇಳಿರಲಿಲ್ಲ. ಆದರೆ ಕರ್ನಾಟಕದಲ್ಲಿ ಬಿಜೆಪಿ ನಾಯಕರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ” ಎಂಬ ಭಾವನೆ ಗಟ್ಟಿಯಾಗುತ್ತಿದೆ.
ಬಲವಂತದ ಮದುವೆಯಂತಾದ ಮೈತ್ರಿ
ಮೇಲ್ಮಟ್ಟದಲ್ಲಿ ನಾಯಕರು ಕೈಕುಲುಕಿದರೂ, ತಳಮಟ್ಟದಲ್ಲಿ ಕಾರ್ಯಕರ್ತರ ಮನಸ್ಸುಗಳು ಒಂದಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ಹಲವು ದಶಕಗಳಿಂದ ಪರಸ್ಪರ ಎದುರಾಳಿಗಳಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ರಾತ್ರೋರಾತ್ರಿ ಒಂದಾಗುವುದು ಅಸಾಧ್ಯ ಎಂಬ ವಾಸ್ತವತೆ ಮೈತ್ರಿಯನ್ನು ‘ಬಲವಂತದ ಮದುವೆ’ಯಂತೆ ಮಾಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೀಟು ಹಂಚಿಕೆ ದೊಡ್ಡ ಕಗ್ಗಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜೆಡಿಎಸ್‌ಗೆ ಗ್ರಾಮೀಣ ಭಾಗಗಳಲ್ಲಿ ಗಟ್ಟಿಯಾದ ನೆಲೆ ಇದ್ದರೂ, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಇದೇ ಸಂಘರ್ಷ ಈಗ ಮೈತ್ರಿಗೆ ಮುಳುವಾಗಿದೆ.
ಶಾಸಕರಿಂದಲೇ ಬಹಿರಂಗ ವಿರೋಧ
ಮೈತ್ರಿಗೆ ವಿರೋಧ ಕೇವಲ ಕಾರ್ಯಕರ್ತರ ಮಟ್ಟದಲ್ಲಷ್ಟೇ ಸೀಮಿತವಾಗಿಲ್ಲ. ಜೆಡಿಎಸ್‌ನ ಹಾಲಿ ಶಾಸಕರಲ್ಲಿಯೂ ಅಸಮಾಧಾನ ತೀವ್ರವಾಗಿದೆ. ದೇವದುರ್ಗ ಶಾಸಕಿಯಾದ ಕರೆಮ್ಮ ನಾಯಕ್, ಬಿಜೆಪಿ ನಾಯಕರಿಂದಲೇ ತಮಗೆ ತೊಂದರೆ ಎದುರಾಗುತ್ತಿದೆ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳ ಮೇಲೆ ಅವಲಂಬಿತವಾಗಿರುವ ತಮ್ಮ ರಾಜಕೀಯಕ್ಕೆ ಬಿಜೆಪಿ ಸಹವಾಸ ಅಡ್ಡಿಯಾಗಲಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಕೂಡ ಮೈತ್ರಿಯಿಂದ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಅತ್ತ ಬಿಜೆಪಿ ಪಾಳಯದಲ್ಲಿಯೂ ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವು ನಾಯಕರು ಜೆಡಿಎಸ್ ಜೊತೆಗಿನ ಮೈತ್ರಿಗೆ ಬಹಿರಂಗ ವಿರೋಧ ವ್ಯಕ್ತಪಡಿಸಿರುವುದು ಗಮನಾರ್ಹ.
2028ರ ಚುನಾವಣೆಗೆ ಮುನ್ಸೂಚನೆಯೇ?
ಲೋಕಸಭಾ ಚುನಾವಣೆ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ವಿಚಾರಗಳ ಸುತ್ತ ನಡೆಯಿತು. ಹೀಗಾಗಿ ಅಲ್ಲಿ ಒಳಗಿನ ಭಿನ್ನಾಭಿಪ್ರಾಯಗಳು ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಆದರೆ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಂಪೂರ್ಣವಾಗಿ ಸ್ಥಳೀಯ ಸಮಸ್ಯೆಗಳು, ಅಭ್ಯರ್ಥಿಯ ವರ್ಚಸ್ಸು ಮತ್ತು ತಳಮಟ್ಟದ ಸಂಘಟನೆಗಳ ಮೇಲೆ ನಿಂತಿರುತ್ತವೆ.
ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ 2028ರ ವಿಧಾನಸಭಾ ಚುನಾವಣೆಯ ವೇಳೆಗೆ ಬಿಜೆಪಿ–ಜೆಡಿಎಸ್ ಮೈತ್ರಿ ಉಳಿಯುವುದು ಕಷ್ಟಸಾಧ್ಯ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿವೆ. ವಿಜಯೇಂದ್ರ ಅವರ ಹೇಳಿಕೆ ಮತ್ತು ದೇವೇಗೌಡರ ಪ್ರತಿಕ್ರಿಯೆ ಕೇವಲ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ, ಪಕ್ಷ ಸಂಘಟನೆ ಮತ್ತು ನಾಯಕತ್ವದ ವಿಚಾರದಲ್ಲಿ ಈ ಬಿರುಕು ಇನ್ನಷ್ಟು ಅಗಲುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This