Home » ಬೀದರ ಜಿಲ್ಲೆ » ಚನ್ನಬಸವ ಪಟ್ಟದ್ದೇವರು ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಶಿಲ್ಪಿ: ಶಾಸಕ ಪ್ರಭು ಚವ್ಹಾಣ್

ಚನ್ನಬಸವ ಪಟ್ಟದ್ದೇವರು ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಶಿಲ್ಪಿ: ಶಾಸಕ ಪ್ರಭು ಚವ್ಹಾಣ್

ಕಮಲನಗರ:ಶಿಕ್ಷಣದ ಮಹತ್ವವನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಅರಿತಿದ್ದ ಮಹಾನ್ ಚೇತನ ಚನ್ನಬಸವ ಪಟ್ಟದ್ದೇವರು ವಿದ್ಯಾಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದರು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟದ್ದೇವರ ಹುಟ್ಟೂರಲ್ಲಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು. ಸಮಾಜದ ಹಿಂದುಳಿದ ವರ್ಗಗಳಿಗೆ ಶಿಕ್ಷಣದ ಬೆಳಕು ನೀಡಿದ ಪಟ್ಟದ್ದೇವರ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಪಟ್ಟದ್ದೇವರ ಸೇವೆ ಜನಪರ ಮತ್ತು ಸಮಾಜಪರ: ಶರಣಬಸವ ಸ್ವಾಮೀಜಿ
ಬಸವ ಬೆಳವಿ ಚರಂತೇಶ್ವರ ವಿರಕ್ತಮಠದ ಶರಣಬಸವ ಸ್ವಾಮೀಜಿ ಮಾತನಾಡಿ, ಗಡಿಭಾಗದಲ್ಲಿ ಚನ್ನಬಸವ ಪಟ್ಟದ್ದೇವರು ಸಲ್ಲಿಸಿದ ಜನಪರ, ಜೀವಪರ ಹಾಗೂ ಸಮಾಜಪರ ಸೇವೆಗಳು ಎಲ್ಲರಿಗೂ ಪ್ರೇರಣಾದಾಯಕವಾಗಿವೆ. ಶರಣಪಥದಲ್ಲಿ ಜೀವನ ಸಾಗಿಸಿದ ಮಹಾನ್ ಚೇತನರಾಗಿದ್ದ ಅವರು ನಿಜಾರ್ಥದಲ್ಲಿ ಸಮಾಜ ಸುಧಾರಕರಾಗಿದ್ದರು ಎಂದು ತಿಳಿಸಿದರು.
ವಚನ ಸಾಹಿತ್ಯ ಮಾನವೀಯ ಮೌಲ್ಯಗಳ ಭಂಡಾರ: ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಚನ ಸಾಹಿತ್ಯದಲ್ಲಿರುವ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅಂಧಶ್ರದ್ಧೆ, ಸ್ತ್ರೀ ಶೋಷಣೆ ಹಾಗೂ ಭಯೋತ್ಪಾದಕತೆಯಂತಹ ದುಷ್ಪ್ರವೃತ್ತಿಗಳನ್ನು ನಿರ್ಮೂಲನೆ ಮಾಡಬಹುದು ಎಂದರು. ಶರಣರ ವಚನಗಳು ವಿಶ್ವಮಾನ್ಯವಾದ ವಿಸ್ಮಯವಾಗಿವೆ ಎಂದು ಹೇಳಿದರು.
ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ, ಖೇಡ್–ಸಂಗಮ ನೀಲಾಂಬಿಕಾ ಆಶ್ರಮದ ಮಹಾದೇವಮ್ಮ ತಾಯಿ, ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಸಜ್ಜನ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಝುಲ್ಪೆ ಸೇರಿದಂತೆ ಪ್ರಕಾಶ ಟೊಣ್ಣೆ, ಚಂದ್ರಕಾಂತ ವೈಜಾಪುರೆ, ಲಿಂಗಾನಂದ ಮಹಾಜನ, ಪ್ರಭುರಾವ ಕಳಸೆ, ರಾಜಕುಮಾರ ಬಿರಾದಾರ, ಶಿವಾನಂದ ವಡ್ಡೆ, ಪ್ರವೀಣ ಪಾಟೀಲ್, ಸಂತೋಷ ಬಿರಾದಾರ, ಸುರೇಶ ಸೊಲ್ಲಾಪುರೆ, ಶಿವಶರಣಪ್ಪ ಚಿಕಮುರ್ಗೆ, ಮಲ್ಲಿಕಾರ್ಜುನ ದಾನಾ, ರಂಗರಾವ ಜಾಧವ ಮತ್ತಿತರರು ಉಪಸ್ಥಿತರಿದ್ದರು.
ಉದಗಿರ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಮೇಶ ಅಂಬರಖಾನೆ ಅವರು ಬಸವ ಗುರುಪೂಜೆಯನ್ನು ನೆರವೇರಿಸಿದರು.
ಸನ್ಮಾನ ಕಾರ್ಯಕ್ರಮ
ಪ್ರಕಾಶ ಮಾನಕರಿ, ಅಶೋಕ ಶೇರೆ, ರವಿ ಕಾರಬಾರಿ, ಕಾಶಿನಾಥ ಬಾವಗೆ, ಸಿದ್ರಾಮಪ್ಪ ಬಿರಾದಾರ ಹಾಗೂ ಶೇಷೆರಾವ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಇದಲ್ಲದೆ, ಚಿತ್ರಸಂತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಜೀವಕುಮಾರ ಸಂಗಮೆ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮಡಿವಾಳಪ್ಪ ಮಹಾಜನ ಸ್ವಾಗತಿಸಿದರು. ಉಮಾಕಾಂತ ಮಹಾಜನ ವಂದಿಸಿದರು. ನವಲಿಂಗ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಅದ್ದೂರಿ ಮೆರವಣಿಗೆ
ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವದ ಅಂಗವಾಗಿ ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರನ್ನು ಸಾರೋಟಿಯಲ್ಲಿ ಮೆರವಣಿಗೆ ಮಾಡಲಾಯಿತು. ಚನ್ನಬಸವ ಕಾಲೋನಿಯಿಂದ ಹಿರೇಮಠ ಸಂಸ್ಥಾನದ ಶಾಖಾ ಮಠದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಪಟ್ಟಣದ ನಿವಾಸಿಗಳು ತಮ್ಮ ಮನೆಯ ಮುಂಭಾಗದಲ್ಲಿ ರಂಗೋಲಿ ಹಾಕಿ, ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಿದರು. ಮೆರವಣಿಗೆಯುದ್ದಕ್ಕೂ ಕೋಲಾಟ ಮಹಿಳಾ ಸಂಘದವರ ಭಜನೆ, ಶಾಲಾ ಮಕ್ಕಳ ಲೇಝಿಮ್ ಹಾಗೂ ನೃತ್ಯ ಪ್ರದರ್ಶನಗಳು ಜನರ ಗಮನ ಸೆಳೆದವು.
ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಬಸವ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ಸಿಪಿಐ ಶ್ರೀಕಾಂತ ಅಲ್ಲಾಪೂರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಆಶಾ ರಾಠೋಡ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This