ಬೆಂಗಳೂರು:ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದ್ದು, ಜೇಷ್ಠತಾ ಪಟ್ಟಿಗೆ ಅನುಗುಣವಾಗಿ ಖಾಲಿ ಇರುವ ಹಿರಿಯ ಮುಖ್ಯ ಶಿಕ್ಷಕರ (Senior Head Master – SHM) ಹುದ್ದೆಗಳಿಗೆ ಬಡ್ತಿ ನೀಡಲು ರಾಜ್ಯಾದ್ಯಂತ ಏಕಕಾಲಕ್ಕೆ ಕೌನ್ಸಿಲಿಂಗ್ ನಡೆಸಲು ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ (HM) ಹಿರಿಯ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡುವ ಪ್ರಕ್ರಿಯೆಯನ್ನು ಜನವರಿ 1ರಿಂದ ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ಬಳಿಕ ವಿವಿಧ ಹಂತದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕೌನ್ಸಿಲಿಂಗ್ ಮೂಲಕ ಬಡ್ತಿ ಹಾಗೂ ಸ್ಥಳ ನಿಯೋಜನೆ ಮಾಡಲಾಗುವುದು.
ಮೂರು ವರ್ಷಗಳ ನಂತರ ಮರುಚಾಲನೆ
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಹೋರಾಟ ಮತ್ತು ಪ್ರಯತ್ನದ ಫಲವಾಗಿ, ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಬಡ್ತಿ ಪ್ರಕ್ರಿಯೆಗೆ ಮರುಚಾಲನೆ ನೀಡಲಾಗಿದೆ. ಈ ಪ್ರಕ್ರಿಯೆಯಿಂದ ಸುಮಾರು 2000ಕ್ಕೂ ಹೆಚ್ಚು ಮುಖ್ಯ ಶಿಕ್ಷಕರಿಗೆ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು, ಜನವರಿ 31ರೊಳಗೆ ಎಲ್ಲಾ ಬಡ್ತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಯಾವ ನಿಯಮಗಳಡಿ ಬಡ್ತಿ?
ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು–1957ರ ಪ್ರಕಾರ, 2025–26ನೇ ಸಾಲಿನಲ್ಲಿ ಪ್ರಸ್ತುತ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಲಾಗಿದೆ.
ಇದಲ್ಲದೆ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020ರ ಸೆಕ್ಷನ್ 3ರ ಪ್ರಕಾರ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ‘ಸಿ’ ವೃಂದದ ಹುದ್ದೆಗಳಿಗೆ ಬಡ್ತಿ ನೀಡಲಾಗುತ್ತದೆ.
ಜಿಲ್ಲಾ ಮಟ್ಟದಲ್ಲಿ ಜೇಷ್ಠತಾ ಪಟ್ಟಿ ಅಂತಿಮ
ಆಯಾ ವೃಂದವಾರು ಪ್ರಕಟಿಸಲಾಗಿರುವ ಜಿಲ್ಲಾ ಅಂತಿಮ ಜೇಷ್ಠತಾ ಪಟ್ಟಿಗೆ ಅನುಗುಣವಾಗಿ ಬಡ್ತಿ ನೀಡಲಾಗುತ್ತದೆ. ದಿನಾಂಕ 01-01-2025ಕ್ಕೆ ಇರುವ ಜೇಷ್ಠತಾ ಸ್ಥಿತಿಯಂತೆ ಬಡ್ತಿಗೆ ಅರ್ಹರಾಗಿರುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಪಟ್ಟಿ ಅಂತಿಮಗೊಳಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಏಕಕಾಲದಲ್ಲಿ ಕೌನ್ಸಿಲಿಂಗ್
ಜಿಲ್ಲೆಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳ ಆಧಾರದ ಮೇಲೆ, ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ಅವರ ಹಂತದಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಕೌನ್ಸಿಲಿಂಗ್ ಮೂಲಕ ಬಡ್ತಿ ಪ್ರಕ್ರಿಯೆ ನಡೆಸಲಾಗುತ್ತದೆ.
ಅಂಗವಿಕಲರಿಗೆ ಮೀಸಲಾತಿ
ಬಡ್ತಿ ಪ್ರಕ್ರಿಯೆಯಲ್ಲಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ನಿಯಮಾನುಸಾರ ಮೀಸಲಾತಿ ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಂತೆ, ತಜ್ಞರ ಸಮಿತಿಯಿಂದ ಗುರುತಿಸಲಾದ ಅಂಗವೈಕಲ್ಯ ವರ್ಗಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಕೌನ್ಸಿಲಿಂಗ್ ವೇಳೆ ಪಾಲಿಸಬೇಕಾದ ಮಾರ್ಗಸೂಚಿಗಳು
1. ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ–2020ರ ಸೆಕ್ಷನ್ 3ರ ಪ್ರಕಾರ, ‘ಸಿ’ ವಲಯದ ಶಾಲೆಗಳಲ್ಲಿ ಖಾಲಿ ಹುದ್ದೆ ಸೃಷ್ಟಿಸುವ ಸಲುವಾಗಿ,
‘ಬಿ’ ವಲಯದಲ್ಲಿರುವ ಹಿರಿಯ ಮುಖ್ಯ ಶಿಕ್ಷಕರನ್ನು ‘ಎ’ ವಲಯಕ್ಕೆ
‘ಸಿ’ ವಲಯದಲ್ಲಿರುವ ಹಿರಿಯ ಮುಖ್ಯ ಶಿಕ್ಷಕರನ್ನು ‘ಬಿ’ ವಲಯಕ್ಕೆ
ಕೌನ್ಸಿಲಿಂಗ್ ಮೂಲಕ ಸ್ಥಳಾಂತರಿಸಲಾಗುತ್ತದೆ.
2. ಸೆಕ್ಷನ್ 10ರ ಪ್ರಕಾರ, ವಲಯ ವರ್ಗಾವಣೆಯ ಸಂದರ್ಭದಲ್ಲಿ ಹಿರಿಯ ಮುಖ್ಯ ಶಿಕ್ಷಕರಿಗೆ ನಿಯಮಾನುಸಾರ ಆದ್ಯತೆ ನೀಡಲಾಗುತ್ತದೆ.











