ಬೀದರ್ | ಡಿ.26:ಔರಾದ(ಬಾ) ಪಟ್ಟಣದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೋಲಿ ಮಾಡಲಾಗುತ್ತಿದ್ದು, ಸರಕಾರ ನಿಗದಿಪಡಿಸಿದ ಸಮಯದಂತೆ ಕಾರ್ಯನಿರ್ವಹಿಸದೇ ಫಲಾನುಭವಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ಯುವ ಘಟಕ ರಾಜ್ಯಾಧ್ಯಕ್ಷ ಲಕ್ಷ್ಮಣ ಎಸ್. ದೇವಕ ಅವರು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ, ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳು ಪ್ರತಿ ಫಲಾನುಭವಿಯಿಂದ 30ರಿಂದ 40 ರೂಪಾಯಿಗಳವರೆಗೆ ಹಣ ವಸೋಲಿ ಮಾಡುತ್ತಿದ್ದು, ತಿಂಗಳಲ್ಲಿ ಕೇವಲ 3–4 ದಿನ ಮಾತ್ರ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಔರಾದ(ಬಾ) ಪಟ್ಟಣ ವ್ಯಾಪ್ತಿಗೆ ಒಳಪಡುವ ಸುಮಾರು 7–8 ತಾಂಡಗಳ ಜನರಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಪ್ರತಿ ವ್ಯಕ್ತಿಗೆ ನೀಡಬೇಕಾದ ಪ್ರಮಾಣಕ್ಕಿಂತ 2 ಕೆ.ಜಿ ಅಕ್ಕಿಯನ್ನು ಕಡಿಮೆ ನೀಡಿ, ತಕ್ಕಡಿಯಲ್ಲಿಯೂ 1–2 ಕೆ.ಜಿ ಕಡಿಮೆ ತೂಕ ತೋರಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ಸಮಯದ ಫಲಕ, ಪ್ರತಿ ವ್ಯಕ್ತಿಗೆ ಲಭ್ಯವಿರುವ ಆಹಾರ ಧಾನ್ಯಗಳ ಮಾಹಿತಿ ಫಲಕಗಳನ್ನು ಅಳವಡಿಸದೇ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂಗಡಿ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸ್ಪಂದಿಸದೆ, ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ 8 ದಿನಗಳೊಳಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ, ತಮ್ಮ ಸಂಘಟನೆಯ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಧರಣಿ–ಸತ್ಯಾಗ್ರಹ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶ್ರೀ ಸಚೀನ ಮೇತ್ರ, ಯುವ ಮುಖಂಡ ರಾಜಕುಮಾರ ಮುಧಾಳ, ಅಮರೇಶ್ವರ ದ್ಯಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.









