Home » ಬೀದರ ಜಿಲ್ಲೆ » ಔರಾದ ತಾಲ್ಲೂಕಿನ ಏಕಂಬ ಗ್ರಾಮ ಪಂಚಾಯತ್‌ನಲ್ಲಿ ಅಧಿಕಾರಿಗಳ ನಿರ್ಲಕ್ಷ

ಔರಾದ ತಾಲ್ಲೂಕಿನ ಏಕಂಬ ಗ್ರಾಮ ಪಂಚಾಯತ್‌ನಲ್ಲಿ ಅಧಿಕಾರಿಗಳ ನಿರ್ಲಕ್ಷ

ಔರಾದ ತಾಲ್ಲೂಕಿನ ಏಕಂಬ ಗ್ರಾಮ ಪಂಚಾಯತ್‌ನಲ್ಲಿ ಅಧಿಕಾರಿಗಳ ನಿರ್ಲಕ್ಷ – ಪಂಚಾಯತ್ ಕಚೇರಿಯಲ್ಲೇ ನಾಯಿಗಳ ವಾಸ, ಅಹಿಂದ ಯುವ ಘಟಕದಿಂದ ತೀವ್ರ ಖಂಡನೆ
ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಏಕಂಬ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತೀವ್ರ ನಿರ್ಲಕ್ಷ ಮತ್ತು ಬೇಜವಾಬ್ದಾರಿತನ ಬಯಲಿಗೆ ಬಂದಿದೆ. ಗ್ರಾಮ ಪಂಚಾಯತ್ ಕಚೇರಿಯಲ್ಲೇ ನಾಯಿಗಳು ವಾಸವಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಳಿತುಕೊಳ್ಳುವ ಕುರ್ಚಿಯ ಮೇಲೆಯೇ ನಾಯಿಗಳು ಕುಳಿತುಕೊಳ್ಳುತ್ತಿರುವ ದೃಶ್ಯಗಳು ಸಾರ್ವಜನಿಕರ ಕಣ್ಣಿಗೆ ಬಿದ್ದಿವೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಮರೆತು, ದಿನನಿತ್ಯ ಪಂಚಾಯತ್‌ಗೆ ಹಾಜರಾತಿ ಹಾಕಿ ನಂತರ ವೈಯಕ್ತಿಕ ಕೆಲಸಗಳಿಗಾಗಿ ಮನೆಗೆ ತೆರಳುತ್ತಿರುವ ಆರೋಪಗಳು ಕೇಳಿಬಂದಿವೆ. ಸಾರ್ವಜನಿಕರು ತಮ್ಮ ಸಮಸ್ಯೆಗಳೊಂದಿಗೆ ಪಂಚಾಯತ್ ಕಚೇರಿಗೆ ಬಂದಾಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ “ನಾನು ಮೀಟಿಂಗ್‌ನಲ್ಲಿ ಇದ್ದೇನೆ” ಎಂದು ನೇರ ಉತ್ತರ ನೀಡುತ್ತಾರೆ. ಅಲ್ಲದೆ, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದರೆ “ನೀವು ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ” ಎಂಬ ಉಡಾಫೆಯ ಮಾತುಗಳನ್ನು ಸಾರ್ವಜನಿಕರಿಗೆ ಹೇಳುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇಂತಹ ನಿರ್ಲಕ್ಷತನದ ಪರಿಣಾಮವಾಗಿ ಇಂದು ಏಕಂಬ ಗ್ರಾಮ ಪಂಚಾಯತ್ ಕಚೇರಿ ಸಾರ್ವಜನಿಕ ಸೇವಾ ಕೇಂದ್ರವಾಗದೆ, ನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದಕ್ಕೆ ನೇರ ಹೊಣೆಗಾರರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಈ ಕುರಿತು ಅಹಿಂದ ಯುವ ಘಟಕ ರಾಜ್ಯ ಅಧ್ಯಕ್ಷರಾದ ಲಕ್ಷ್ಮಣ ದೇವಕತೆ ಅವರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದು, “ಸಾರ್ವಜನಿಕರ ಸೇವೆಗೆ ಇರುವ ಪಂಚಾಯತ್ ಕಚೇರಿ ಈ ರೀತಿ ಅವ್ಯವಸ್ಥೆಯ ಕೇಂದ್ರವಾಗಿರುವುದು ಅತ್ಯಂತ ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ನಿರ್ಲಕ್ಷ ವಹಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯತ್‌ಗಳೇ ಗ್ರಾಮೀಣ ಜನರ ಮೊದಲ ಆಡಳಿತ ಕೇಂದ್ರವಾಗಿರುವಾಗ, ಈ ರೀತಿಯ ನಿರ್ಲಕ್ಷತನ ಮುಂದುವರಿದರೆ ಸಾರ್ವಜನಿಕರ ಆಡಳಿತದ ಮೇಲಿನ ನಂಬಿಕೆ ಕುಸಿಯಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This