Home » ಬೀದರ ಜಿಲ್ಲೆ » ಮದ್ಯ ನಿಷೇಧ ಇಲ್ಲದಿದ್ದರೆ ಸಿದ್ದರಾಮಯ್ಯ ರಾಕ್ಷಸ: ಶರಣು ಸಲಗರ್

ಮದ್ಯ ನಿಷೇಧ ಇಲ್ಲದಿದ್ದರೆ ಸಿದ್ದರಾಮಯ್ಯ ರಾಕ್ಷಸ: ಶರಣು ಸಲಗರ್

ಬೀದರ್, ಡಿ.24:ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಮದ್ಯದ ಹಾವಳಿ ಹಾಗೂ ಕಾಂಗ್ರೆಸ್ ಸರ್ಕಾರದ ಅಬಕಾರಿ ನೀತಿಯ ವಿರುದ್ಧ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮದ್ಯ ನಿಷೇಧ ಜಾರಿಗೊಳಿಸದಿದ್ದರೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪಾಲಿಗೆ ರಾಕ್ಷಸನಂತೆ ಕಾಣುತ್ತಾರೆ ಎಂದು ಕಿಡಿಕಾರಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಸರ್ಕಾರ ಅಬಕಾರಿ ಅಧಿಕಾರಿಗಳಿಗೆ ಮದ್ಯ ಮಾರಾಟ ಗುರಿ ನೀಡುತ್ತಿದೆ. ಇದರಿಂದ ಕರ್ನಾಟಕವು ನಶಾ ರಾಜ್ಯವಾಗಿ ಪರಿವರ್ತನೆಯಾಗುತ್ತಿದೆ ಎಂದು ಆರೋಪಿಸಿದರು.
ಕಿರಾಣಿ ಅಂಗಡಿಗಳೇ ವೈನ್ ಶಾಪ್‌ಗಳಾಗುತ್ತಿವೆ
ಸರ್ಕಾರದ ಅಬಕಾರಿ ನೀತಿಯಿಂದ ಕಿರಾಣಿ ಅಂಗಡಿಗಳು ಮತ್ತು ಪಾನ್ ಶಾಪ್‌ಗಳು ವೈನ್ ಶಾಪ್‌ಗಳಾಗಿ ಬದಲಾಗುತ್ತಿವೆ. ಮದ್ಯ ಎಲ್ಲೆಡೆ ಸುಲಭವಾಗಿ ದೊರೆಯುತ್ತಿರುವುದರಿಂದ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಹಳ್ಳಿಗಳು ‘ವಿಧವಾ ಗ್ರಾಮ’ಗಳಾಗುತ್ತಿವೆ
ಮದ್ಯ ಮತ್ತು ಗಾಂಜಾ ಚಟದಿಂದಾಗಿ ಯುವಕರು ಕಿಡ್ನಿ ವೈಫಲ್ಯ, ಕ್ಯಾನ್ಸರ್‌ನಂತಹ ಭೀಕರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಣ್ಣ ಮಕ್ಕಳು ಹಾಗೂ ಯುವತಿಯರು ಸಹ ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.
ವಿಶೇಷವಾಗಿ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳು ಮದ್ಯದ ಹಾವಳಿಯಿಂದ ‘ವಿಧವಾ ಗ್ರಾಮ’ಗಳಾಗಿ ಬದಲಾಗುತ್ತಿವೆ. ಮದ್ಯ ನಿಷೇಧವಾಗದೆ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ದೇವರಾಜ ಅರಸ್ ಅಥವಾ ರಾಕ್ಷಸ? – ಸಿಎಂಗೆ ಸಲಹೆ
ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ ಶಾಸಕ ಶರಣು ಸಲಗರ್,
“ನೀವು ದೇವರಾಜ ಅರಸ್ ಅವರಿಗಿಂತ ದೊಡ್ಡ ಹೆಸರು ಮಾಡಲು ಹೊರಟಿದ್ದೀರಿ. ಆದರೆ, ಅರಸ್ ಅವರಂತೆ ಜನಮಾನಸದಲ್ಲಿ ಉಳಿಯಬೇಕೆಂದರೆ ಮೊದಲು ಸಾರಾಯಿ ಬಂದ್ ಮಾಡಬೇಕು. ಮದ್ಯ ನಿಷೇಧ ಮಾಡಿದರೆ ನೀವು ವಿಶ್ವಗುರು ಬಸವಣ್ಣನವರಂತಾಗುತ್ತೀರಿ. ಆಗ ನಿಮ್ಮ ಫೋಟೋವನ್ನು ನಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತೇನೆ,” ಎಂದು ಹೇಳಿದರು.
“ಒಂದು ಕೈಯಲ್ಲಿ ಗ್ಯಾರೆಂಟಿ ಹಣ ಕೊಟ್ಟು, ಮತ್ತೊಂದು ಕೈಯಲ್ಲಿ ಮದ್ಯ ಮಾರಾಟದ ಮೂಲಕ ಜನರ ಹಣ ಲೂಟಿ ಮಾಡುವುದು ಸರಿಯಲ್ಲ” ಎಂದು ಕಿಡಿಕಾರಿದರು.
ಮದ್ಯ ನಿಷೇಧಕ್ಕಾಗಿ ಒಂದು ಕೋಟಿ ಮಹಿಳೆಯರ ಸಹಿ ಅಭಿಯಾನ
ಮದ್ಯ ನಿಷೇಧಕ್ಕಾಗಿ ರಾಜ್ಯಾದ್ಯಂತ ಒಂದು ಕೋಟಿ ಮಹಿಳೆಯರ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲಾಗುವುದು ಎಂದು ಘೋಷಿಸಿದ ಅವರು,
“ಸಾರಾಯಿ ಮುಕ್ತ ರಾಜ್ಯ ಮಾಡಿದರೆ ನಮ್ಮ ಮಹಿಳೆಯರೇ ಸರ್ಕಾರಕ್ಕೆ ಪ್ರತಿ ತಿಂಗಳು ಸಾವಿರ ರೂಪಾಯಿ ನೀಡಲು ಸಿದ್ಧರಾಗಿದ್ದಾರೆ” ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಮದ್ಯ ನಿಷೇಧ ಅಸಾಧ್ಯ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮದ್ಯ ನಿಷೇಧ ಸಾಧ್ಯವಿಲ್ಲ ಎಂದು ಟೀಕಿಸಿದ ಅವರು,
“ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಕರ್ನಾಟಕವನ್ನು ಸಾರಾಯಿ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸವಾಲು
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮದ್ಯ ನಿಷೇಧ ಮಾಡದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶರಣು ಸಲಗರ್ ಅವರು ಬಹಿರಂಗ ಸವಾಲು ಹಾಕಿದರು.
“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೂ ಮದ್ಯ ನಿಷೇಧ ಜಾರಿಯಾಗದಿದ್ದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಘೋಷಿಸಿದರು.

Source :- Suvarna News

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This