ಡಾ. ಚನ್ನಬಸವ ಪಟ್ಟದ್ದೇವರು ಗಡಿಭಾಗದಲ್ಲಿ ಕನ್ನಡಕ್ಕೆ ಮರುಜನ್ಮ ನೀಡಿದ ಮಹಾನ್ ವ್ಯಕ್ತಿ : ಪ್ರೊ. ಎಸ್. ಎನ್. ಶಿವಣಕರ
ಗಡಿಭಾಗದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ ವಿಶಿಷ್ಟ ಗುರುತು ಮೂಡಿಸಿದ್ದ ಡಾ. ಚನ್ನಬಸವ ಪಟ್ಟದ್ದೇವರು, ನಿಜಾಮರ ಆಡಳಿತದ ಕಾಲದಲ್ಲಿ ಹಿನ್ನಡೆಯಾಗಿದ್ದ ಕನ್ನಡ ಭಾಷೆಗೆ ಮರುಜನ್ಮ ನೀಡಿದ ಕೀರ್ತಿಗೆ ಪಾತ್ರರಾದವರು ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಎಸ್. ಎನ್. ಶಿವಣಕರ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಡಾ. ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಮ್ಮ ಜೀವನಪೂರ್ತಿ ಕನ್ನಡ ಭಾಷೆ, ವಚನ ಸಾಹಿತ್ಯ ಹಾಗೂ ಸಮಾಜ ಸುಧಾರಣೆಗೆ ಶ್ರಮಿಸಿದ ಡಾ. ಚನ್ನಬಸವ ಪಟ್ಟದ್ದೇವರ ಜಯಂತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ಆಚರಿಸಲಾಗುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಸಜ್ಜನ್, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಶರಣರು ಜಾತೀಯತೆ, ಮೂಢನಂಬಿಕೆ ಹಾಗೂ ಮೇಲು-ಕೀಳು ಭಾವನೆಗಳನ್ನು ತೊಡೆದು ಹಾಕಿ ಕಲ್ಯಾಣ ರಾಜ್ಯದ ನಿರ್ಮಾಣಕ್ಕೆ ಶ್ರಮಿಸಿದಂತೆ, ಇಪ್ಪತ್ತನೇ ಶತಮಾನದಲ್ಲಿ ಡಾ. ಚನ್ನಬಸವ ಪಟ್ಟದ್ದೇವರು ಆ ಚಿಂತನೆಗಳನ್ನು ಮುಂದುವರಿಸಿಕೊಂಡು ಬಂದರು ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ ಕೂಡ ಮಾತನಾಡಿ, ಪಟ್ಟದ್ದೇವರ ಸೇವೆ ಹಾಗೂ ಚಿಂತನೆಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಮಂಜುಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಯಶವಂತ ಬಿರಾದಾರ, ಉಪಾಧ್ಯಕ್ಷ ಧನರಾಜ ಭವರಾ, ಸಾಹಿತಿ ಸಂಗಮೇಶ ಮುರ್ಕೆ, ಎಎಸ್ಐ ಯಾದವ್, ಬಾಲಾಜಿ ತೇಲಂಗ್, ಮನೋಹರ ಬಿರಾದಾರ, ಶಿವಕುಮಾರ ಪಾಟೀಲ್, ಗುಂಡಪ್ಪ ದಾನಾ, ಮನೋಜ ಹಿರೇಮಠ, ಪರಮೇಶ್ವರ ರಾಂಪುರೆ, ನಿತಿನ್ ಶಿವಣಕರ, ಮಹಾದು ಬರ್ಗೆ, ಸಂತೋಷ ಸುಲಾಕೆ, ಉತ್ತಮರಾವ ಮಾನೆ, ಸಂಜೀವಕುಮಾರ ಮುಳೆ, ಸಂಗಮೇಶ ಝುಲೈ, ಅಮೂಲ ಸೂರ್ಯವಂಶಿ, ಸಾಯಿನಾಥ ಕಾಂಬಳೆ, ಮಹೇಶ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಪ್ರಶಾಂತ ಖಾನಾಪುರೆ ಸ್ವಾಗತಿಸಿ, ಮಹಾದೇವ ಮಡಿವಾಳ ನಿರೂಪಿಸಿದರು.







