ಬೆಳಗಾವಿ : ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ಮಹತ್ವದ ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀಕರಣ) ವಿಧೇಯಕ–2025’ ಅನ್ನು ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಬುಧವಾರ ನಡೆದ ಶಾಸನ ರಚನಾ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ವಿಧೇಯಕವನ್ನು ಅಧಿಕೃತವಾಗಿ ಮಂಡಿಸಿದರು. ಈ ವಿಧೇಯಕವು ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಜಾರಿಯಲ್ಲಿರುವ ಸರಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನು ಮಾನ್ಯತೆ ನೀಡುವ ಉದ್ದೇಶ ಹೊಂದಿದೆ.
ಆಯೋಗದ ವರದಿ ಮತ್ತು ಸರ್ಕಾರದ ನಿರ್ಧಾರ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಅಧ್ಯಯನ ನಡೆಸಿದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗ ತನ್ನ ವರದಿಯನ್ನು ಈಗಾಗಲೇ ಸಲ್ಲಿಸಿತ್ತು. ಆಯೋಗದ ಶಿಫಾರಸುಗಳನ್ನು ಕೆಲ ಮಾರ್ಪಾಡುಗಳೊಂದಿಗೆ ರಾಜ್ಯ ಸರ್ಕಾರ ಅನುಮೋದಿಸಿದ್ದು, ಪರಿಶಿಷ್ಟ ಜಾತಿಗಳಿಗೆ ಒಟ್ಟು ಶೇ.17ರಷ್ಟು ಮೀಸಲಾತಿಯೊಳಗೆ 101 ಜಾತಿಗಳಿಗೆ ಉಪವರ್ಗೀಕರಣ ಮಾಡಲಾಗಿದೆ.
ಉಪವರ್ಗೀಕರಣದ ವಿವರ
ವಿಧೇಯಕದ ಪ್ರಕಾರ ಪರಿಶಿಷ್ಟ ಜಾತಿಗಳ ಶೇ.17ರಷ್ಟು ಮೀಸಲಾತಿಯನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:
ಪ್ರವರ್ಗ–ಎ: 16 ಜಾತಿಗಳು – ಶೇ.6
ಪ್ರವರ್ಗ–ಬಿ: 19 ಜಾತಿಗಳು – ಶೇ.6
ಪ್ರವರ್ಗ–ಸಿ: 63 ಜಾತಿಗಳು – ಶೇ.5
(ಒಟ್ಟು 98 ಜಾತಿಗಳಿಗೆ ಈ ಹಂಚಿಕೆ ಅನ್ವಯವಾಗಲಿದೆ)
ಇದೇ ವೇಳೆ ಆದಿ ಆಂಧ್ರ–1, ಆದಿ ಆಂಧ್ರ–2, ಆದಿಕರ್ನಾಟಕ–3 ಸೇರಿದಂತೆ ‘ಎ’ ಮತ್ತು ‘ಬಿ’ ಪ್ರವರ್ಗಗಳಲ್ಲಿ ಉಲ್ಲೇಖಿಸದಿದ್ದರೂ, ಸಂವಿಧಾನ (ಅನುಸೂಚಿತ ಜಾತಿಗಳ) ಆದೇಶ–1950ರಡಿ ಪಟ್ಟಿ ಮಾಡಲಾದ ಹಾಗೂ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಜಾತಿಗಳು, ಸರ್ಕಾರದ ಸುತ್ತೋಲೆ ಸಂಖ್ಯೆ ಎಸ್‌ಡಬ್ಲ್ಯೂಡಿ 8 ಎಸ್‌ಎಲ್‌ಪಿ 2024 (ಪಿ–5) (2025ರ ಅಕ್ಟೋಬರ್ 8 ಮತ್ತು 9)ರ ಪ್ರಕಾರ ನೀಡುವ ಜಾತಿ ಪ್ರಮಾಣಪತ್ರದ ಆಧಾರದಲ್ಲಿ ಪ್ರವರ್ಗ–ಎ ಅಥವಾ ಪ್ರವರ್ಗ–ಬಿ ಅಡಿಯಲ್ಲಿ ಮೀಸಲಾತಿಗೆ ಆಯ್ಕೆ (opt) ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ.
ಪ್ರವರ್ಗ–ಎ (ಶೇ.6) – ಅತ್ಯಂತ ಹಿಂದುಳಿದ ಜಾತಿಗಳು
ಭಂಬಿ, ಭಾಂಬಿ, ಅಸದಾರು, ಅಸೋಡಿ, ಚಮಡಿಯಾ, ಚಮ್ಮಾರ, ಚಂಬಾರ, ಚಮಗಾರ, ಮೋಚಿಗಾರ, ಮಾದಿಗ, ಮಾದರ, ಮೋಚಿ, ತೆಲುಗು, ಚಂಡಾಲ, ಮಾತಂಗ ಸೇರಿದಂತೆ ಮಾದಿಗ ಸಂಬಂಧಿತ ಜಾತಿಗಳಿಗೆ ಪ್ರವರ್ಗ–ಎ ಅಡಿಯಲ್ಲಿ ಶೇ.6ರಷ್ಟು ಒಳಮೀಸಲಾತಿ ಕಲ್ಪಿಸಲಾಗಿದೆ.
ಪ್ರವರ್ಗ–ಬಿ (ಶೇ.6) – ಹೊಲೆಯ–ಛಲವಾದಿ ಸಂಬಂಧಿತ ಜಾತಿಗಳು
ಛಲವಾದಿ, ಹೊಲೆಯ, ಬಲಗೈ, ಚನ್ನಯ್ಯ, ಮಾಲ, ವಳ್ಳುವನ್, ಮುಂಡಾಲ, ಪರೈಯನ್, ಪರಾಯ ಸೇರಿದಂತೆ ಈ ವರ್ಗದ ಜಾತಿಗಳಿಗೆ ಶೇ.6ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ.
ಪ್ರವರ್ಗ–ಸಿ (ಶೇ.5) – ಇತರೆ ಪರಿಶಿಷ್ಟ ಜಾತಿಗಳು
ಆದಿಯಾ (ಕೊಡಗು ಜಿಲ್ಲೆ), ಅರುಂತತಿಯಾರ್, ಬಂಜಾರ, ಲಂಬಾಣಿ, ಲಮಾಣಿ, ಬುಡ್ಗಜಂಗಮ, ಬೇಡಜಂಗಮ, ಭೋವಿ, ವಡ್ಡರ್, ಚಕ್ಕಲಿಯಾನ್, ದಕ್ಕಲಿಗ, ಹಂಚಿಜೋಗಿ, ಕೊರಚ, ಕೊರಮ, ಮಾಸ್ತಿ, ಸಿಳ್ಳೆಕ್ಯಾತ, ತೋಟಿ, ಗೋಸಂಗಿ, ಡೊಂಬರ ಸೇರಿದಂತೆ ಪ್ರವರ್ಗ–ಸಿ ಅಡಿಯಲ್ಲಿನ ಜಾತಿಗಳಿಗೆ ಶೇ.5ರಷ್ಟು ಒಳಮೀಸಲಾತಿಗೆ ಅವಕಾಶ ನೀಡಲಾಗಿದೆ.
ಉದ್ದೇಶ
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ಸರಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನು ಬಲ ನೀಡುವುದು ಹಾಗೂ ಸಾಮಾಜಿಕ ನ್ಯಾಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ.







