ಬೆಳಗಾವಿ | ಚಳಿಗಾಲ ಅಧಿವೇಶನ – ಉತ್ತರ ಕರ್ನಾಟಕದ ಜನರ ನೋವು-ನಲಿವು ಸದನದಲ್ಲಿ ಪ್ರತಿಧ್ವನಿ
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಜವಾರಿ ಭಾಷೆಯಲ್ಲಿ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳ ಬಗ್ಗೆ ಮಾತನಾಡಿ ವಿಧಾನಸಭೆಯ ಗಮನ ಸೆಳೆದರು.
ಸರ್ಕಾರಕ್ಕೆ ನೇರ ಸವಾಲು ಹಾಕಿದ ಅವರು, “ನೀವೇನಾದರೂ ಸರಾಯಿ ಬಂದ್ ಮಾಡ್ದಿರೀ ಅಂದ್ರೆ ನಮ್ಕಡೆ ಜನ ನಿಮ್ಮ ಫೋಟೋ ಇಟ್ಟು ಪೂಜೆ ಮಾಡ್ತಾರೆ. ಗೃಹಲಕ್ಷ್ಮಿಯ 2 ಸಾವಿರ ನಮ್ಗ್ ಬೇಕಾಗಿಲ್ಲ, ಸರಾಯಿ ಬಂದ್ ಮಾಡ್ರೀ” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
“ಯಾರು ಸರಾಯಿ ಬಂದ್ ಮಾಡ್ತಾರೋ, ಅವ್ರು ಬಸವಣ್ಣ ಆದ್ಹಾಂಗ ಆಗ್ತಾರೆ” ಎಂದು ಭಾವನಾತ್ಮಕವಾಗಿ ಹೇಳಿದರು.
ಸರಾಯಿ ಬಂದ್ ಆಗಬೇಕು – ಜನರ ಆಕ್ರೋಶ
ಪ್ರತಿ ಮನೆಯಲ್ಲೂ ಸರಾಯಿ ಕುಡಿದು ಜನ ಸಾಯ್ತಿದ್ದಾರೆ, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ತಮ್ಮ ಕ್ಷೇತ್ರದ ಗ್ರಾಮಗಳಿಗೆ ಹೋದಾಗ ಜನ ಉಗುಳುವ ಸ್ಥಿತಿ ಬಂದಿದೆ ಎಂದು ನೋವಿನಿಂದ ಹೇಳಿದರು.
“ಈ ರಾಜ್ಯದಲ್ಲಿ ಸರಾಯಿ ಬಂದ್ ಮಾಡಿದ್ರೆ, ನಾನೇ ನನ್ನ ಜಗಲಿಯ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಇಟ್ಟು ಪೂಜೆ ಮಾಡ್ತೀನಿ” ಎಂದು ಸವಾಲು ಹಾಕಿದರು.
ಮನೆ-ಮನೆಗೂ ಸರಾಯಿ ತಂದು ಮಾರಾಟ ನಡೆಯುತ್ತಿದ್ದು, ಸಣ್ಣ-ಸಣ್ಣ ಮಕ್ಕಳು ಕೂಡ ಸರಾಯಿ ಕುಡಿದು ಸಾಯುವ ಸ್ಥಿತಿ ಇದೆ ಎಂದು ಗಂಭೀರ ಆರೋಪ ಮಾಡಿದರು.
ಹಳ್ಳಿಗಳಿಗೆ ಹೋದಾಗ ಮಹಿಳೆಯರು ತಮ್ಮನ್ನು ಸುತ್ತುವರಿದು ಶಾಪ ಹಾಕ್ತಿದ್ದಾರೆ, ಇಂತಹ ಸ್ಥಿತಿಯಲ್ಲಿ ಮತ್ತೆ ಹೇಗೆ ಓಟ್ ಕೇಳಬೇಕು? ಎಂದು ಪ್ರಶ್ನಿಸಿದರು.
ಅತಿವೃಷ್ಟಿ–ಪ್ರವಾಹ: ರೈತರ ಬದುಕು ಧ್ವಂಸ
ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಾಣದಷ್ಟು ಹೆಚ್ಚಿನ ಮಳೆಯಿಂದ ರೈತರು ಭಾರೀ ಬೆಳೆ ನಷ್ಟ ಅನುಭವಿಸಿದ್ದಾರೆ.
ಪ್ರವಾಹದಿಂದ ಜಮೀನಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಅತಿವೃಷ್ಟಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ಎದುರಾಗಿದೆ ಎಂದು ಎಚ್ಚರಿಸಿದರು.
ಪರಿಹಾರಕ್ಕೆ ಹೋರಾಟ – ಸರ್ಕಾರದ ನಿರ್ಲಕ್ಷ್ಯ ಆರೋಪ
ರೈತರ ಪರಿಹಾರಕ್ಕಾಗಿ ತಮ್ಮ ಕ್ಷೇತ್ರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಚಾಟಿ ಏಟು ತಿಂದೆ ಎಂದು ಹೇಳಿದರು.
ಆದರೂ ರಾಜ್ಯ ಸರ್ಕಾರ ಇನ್ನೂ ಸಮರ್ಪಕ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಕದ ಮಹಾರಾಷ್ಟ್ರ ಸರ್ಕಾರ ರೈತರಿಗೆ ಕೈತುಂಬಾ ಪರಿಹಾರ ಹಣ ನೀಡಿದೆ, ಆದರೆ ಕರ್ನಾಟಕದಲ್ಲಿ ರೈತರ ಸಂಕಟಕ್ಕೆ ಸ್ಪಂದನೆ ಇಲ್ಲ ಎಂದು ಆರೋಪಿಸಿದರು.
“ರೈತರ ನೋವಿಗೆ ಸ್ಪಂದಿಸದೇ ಅನ್ಯಾಯ ಮಾಡುವ ಸರ್ಕಾರ ಯಾಕೆ ಬೇಕು?” ಎಂದು ಸದನದಲ್ಲೇ ಪ್ರಶ್ನಿಸಿದರು.
ಅಂತಿಮ ಆಗ್ರಹ
ಸರಾಯಿ ಬಂದ್ ಮಾಡಿ, ವ್ಯಸನಮುಕ್ತ ಉತ್ತರ ಕರ್ನಾಟಕ–ಕಲ್ಯಾಣ ಕರ್ನಾಟಕ ನಿರ್ಮಿಸಿ ಎಂದು ಸರ್ಕಾರವನ್ನು ಕಠಿಣವಾಗಿ ಒತ್ತಾಯಿಸಿದರು.
ರೈತರಿಗೆ ತಕ್ಷಣ ಮತ್ತು ಸಮರ್ಪಕ ಪರಿಹಾರ ನೀಡುವಂತೆ ಆಗ್ರಹಿಸಿದರು.
ಈ ಭಾವನಾತ್ಮಕ ಹಾಗೂ ಕಠಿಣ ಮಾತುಗಳು ಚಳಿಗಾಲ ಅಧಿವೇಶನದಲ್ಲಿ ಸಂಚಲನ ಮೂಡಿಸಿದ್ದು, ಸರ್ಕಾರದ ಮುಂದಿರುವ ಜ್ವಲಂತ ಸಮಸ್ಯೆಗಳತ್ತ ಮತ್ತೊಮ್ಮೆ ಸ್ಪಷ್ಟವಾಗಿ ಬೆಳಕು ಚೆಲ್ಲಿವೆ.







