Home » ಬೀದರ ಜಿಲ್ಲೆ » ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕೆ ತಾಂತ್ರಿಕ ತೊಡಕು

ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕೆ ತಾಂತ್ರಿಕ ತೊಡಕು

ಬಿದರ್‌: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ವರ್ಗೀಕರಣಕ್ಕೆ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕೆ ತಾಂತ್ರಿಕ ತೊಡಕು ಎದುರಾಗಿದೆ.

ಮೇ 5ರಿಂದ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಆರಂಭಗೊಂಡಿದೆ. ಮೊದಲ ಹಂತದ ಸಮೀಕ್ಷೆ ಮೇ 17ರ ವರೆಗೆ ಜರುಗಲಿದೆ.

ಜಿಲ್ಲೆಯ ಆಯಾ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳ (ಬಿಎಲ್‌ಒ) ಮೂಲಕ ಸಮೀಕ್ಷೆ ಕೈಗೊಳ್ಳಲಾಗಿದೆ. ಸರ್ಕಾರ ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಮೊಬೈಲ್‌ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ. ಆದರೆ, ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿರುವ ಕಾರಣ ಸಮೀಕ್ಷಾ ಕಾರ್ಯ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಸಮೀಕ್ಷೆಯಲ್ಲಿ ತೊಡಗಿರುವ ಬಿಎಲ್‌ಒಗಳು ಸಹ ಈ ವಿಷಯವನ್ನು ‘ಪತ್ರಕರ್ತರಿಗೆ ‘ಗೆ ವಿಷಯ ಖಚಿತಪಡಿಸಿದ್ದಾರೆ.

ತಂತ್ರಾಂಶದಲ್ಲಿ ಸಾಕಷ್ಟು ಮಾಹಿತಿಗಳನ್ನು ದಾಖಲಿಸಬೇಕಿದೆ. ಆದಕಾರಣ ಒಂದೇ ಮನೆಯಲ್ಲಿ ಐದಾರೂ ಜನರಿದ್ದರೆ ಸಾಕಷ್ಟು ವಿಳಂಬವಾಗುತ್ತಿದೆ. ಅಲ್ಲದೇ ಎಲ್ಲ ವಿವರ ದಾಖಲಿಸಿದ ನಂತರ ‘ಸಬ್‌ಮಿಟ್‌’ ಮಾಡುವಾಗ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಎಲ್ಲ ವಿವರ ಮತ್ತೆ ದಾಖಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಗಣತಿದಾರರಿಗೂ ಕಿರಿಕಿರಿ ಉಂಟು ಮಾಡಿದೆ.

ಮೊದಲ ದಿನದಿಂದಲೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ, ಇದುವರೆಗೆ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಗುರುವಾರ (ಮೇ 8) ಕೂಡ ಹಲವೆಡೆ ಇಂತಹುದೇ ಸಮಸ್ಯೆ ಆಗಿರುವುದು ಗೊತ್ತಾಗಿದೆ. ಗಣತಿದಾರರು ತಂತ್ರಜ್ಞರೊಂದಿಗೆ ಈ ವಿಷಯ ಕೂಡ ಹಂಚಿಕೊಂಡಿದ್ದಾರೆ. ಇದರಿಂದಾಗಿ ಕೆಲವೆಡೆ ಪರಿಶಿಷ್ಟ ಜಾತಿಯೇತರ ಮನೆಗಳ ವಿವರವಷ್ಟೇ ದಾಖಲಿಸಿ, ತಾಂತ್ರಿಕ ಸಮಸ್ಯೆ ಬಗೆಹರಿದ ನಂತರ ಪರಿಶಿಷ್ಟ ಜಾತಿಯವರ ವಿವರ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಪರಿಶಿಷ್ಟ ಜಾತಿಯವರಾಗಿದ್ದರೆ ಸಾಕಷ್ಟು ವಿವರಗಳನ್ನು ದಾಖಲಿಸಬೇಕಾಗುತ್ತದೆ. ಆದರೆ, ಪರಿಶಿಷ್ಟ ಜಾತಿಯೇತರರ ಮನೆಗಳಿದ್ದರೆ ವಿವರಗಳನ್ನು ದಾಖಲಿಸಬೇಕಿಲ್ಲ. ಆದಕಾರಣ ಹೀಗೆ ಮಾಡಲಾಗುತ್ತಿದೆ ಎಂದು ಗಣತಿದಾರರು ತಿಳಿಸಿದ್ದಾರೆ.

‘ಪೂರ್ವಾಪರಗಳನ್ನು ಪರಿಶೀಲಿಸದೇ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಸಾಧ್ಯತೆ ಇದೆ. ಆದಕಾರಣ ಪದೇ ಪದೇ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಒಬ್ಬ ವ್ಯಕ್ತಿಯ ಮಾಹಿತಿ ಅಪ್‌ಲೋಡ್‌ ಮಾಡಬೇಕಾದರೆ ಸಾಕಷ್ಟು ವಿವರಗಳನ್ನು ತುಂಬಬೇಕಾಗಿದೆ. ಸಮಸ್ಯೆ ಕಾಣಿಸಿಕೊಂಡಾಗ ತಂತ್ರಜ್ಞರಿಗೆ ತಿಳಿಸಿದರೆ, ಈ ವಿಷಯ ಮೇಲಿನವರ ಗಮನಕ್ಕೆ ತರಲಾಗಿದೆ ಎಂದು ಹೇಳುತ್ತಾರಷ್ಟೇ. ನಾಲ್ಕು ದಿನಗಳಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದೇ ರೀತಿ ಸಮಸ್ಯೆಯಾಗುತ್ತಿದ್ದರೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಯುವುದು ಅನುಮಾನ’ ಎಂದು ಹೆಸರು ಹೇಳಲಿಚ್ಛಿಸದ ಗಣತಿದಾರರೊಬ್ಬರು ‘ಪತ್ರಕರ್ತರಿಗೆ’ಗೆ ತಿಳಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

‘ಸರ್ಕಾರ ಕಾಟಾಚಾರಕ್ಕೆ ಸಮೀಕ್ಷೆ ಮಾಡಿಸುತ್ತಿದೆ ಎಂಬ ಅಭಿಪ್ರಾಯ ಸಾಮಾನ್ಯವಾಗಿ ಮೂಡುತ್ತಿದೆ. ಅಲ್ಲದೇ ಕೈಪಿಡಿಯಲ್ಲಿ ಒಂದು ವಿವರವಿದ್ದರೆ, ತಂತ್ರಾಂಶದಲ್ಲಿ ಮತ್ತೊಂದು ವಿವರ ಇದೆ. ಉದಾಹರಣೆಗೆ ಹೊಲೆಯರ ಕೋಡ್‌ ಸಂಖ್ಯೆ ನೋಡಬಹುದು’ ಎಂದು ಹಿರಿಯ ಮುಖಂಡ ವಿಠ್ಠಲದಾಸ ಪ್ಯಾಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬೀದರ್‌ನ ನೌಬಾದ್‌ ಸಮೀಪದ ಅಶೋಕನಗರ ಹಾಗೂ ಲುಂಬಿಣಿ ನಗರದ ಮನೆಯೊಂದರಲ್ಲಿ ಗುರುವಾರ ನಡೆದ ಒಳಮೀಸಲಾತಿ ಗಣತಿ ಸಮೀಕ್ಷೆಯನ್ನು ಪರಿಶೀಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷ ನಾಗೂರೆ ಮತ್ತಿತರರು ಹಾಜರಿದ್ದರು


ಬೇಕಾಬಿಟ್ಟಿ ಸಮೀಕ್ಷೆ ಆರೋಪ
ಜಿಲ್ಲೆಯ ಕೆಲವೆಡೆ ಬೇಕಾಬಿಟ್ಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ‘ಕೆಲವು ಕಡೆ ಒಂದು ಮನೆಯಲ್ಲಿ ಅನೇಕ ಸದಸ್ಯರಿದ್ದರೂ ಒಬ್ಬ ವ್ಯಕ್ತಿಯ ವಿವರ ಮಾತ್ರ ದಾಖಲಿಸಿ ಹೋಗುತ್ತಿದ್ದಾರೆ. ಈ ಸಂಬಂಧ ಅನೇಕರು ಕರೆ ಮಾಡಿ ನನ್ನೊಂದಿಗೆ ವಿಷಯ ಹಂಚಿಕೊಂಡಿದ್ದಾರೆ. ಗಣತಿದಾರರಿಗೆ ಸೂಕ್ತ ತರಬೇತಿ ನೀಡಲಾಗಿದೆಯೋ ಅಥವಾ ನಿಷ್ಕಾಳಜಿಯಿಂದ ಈ ರೀತಿ ಮಾಡುತ್ತಿದ್ದಾರೋ ಗೊತ್ತಿಲ್ಲ’ ಎಂದು ಹಿರಿಯ ಮುಖಂಡ ವಿಠ್ಠಲದಾಸ ಪ್ಯಾಗೆ ತಿಳಿಸಿದ್ದಾರೆ. ಇನ್ನು ಕ್ರೈಸ್ತ ಹಾಗೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿಯ ಸೌಲಭ್ಯ ಪಡೆಯಲು ಅವಕಾಶವಿಲ್ಲ. ಧರ್ಮದ ಕಾಲಂ ಇರದ ಕಾರಣ ಉಪಜಾತಿ ಹೆಸರು ಸೇರಿಸುತ್ತಿದ್ದಾರೆ. ಬೇಡ ಜಂಗಮ ಹಾಗೂ ಬುಡ್ಗ ಜಂಗಮರ ಹೆಸರಲ್ಲೂ ಕೆಲವರು ಮಾಹಿತಿ ದಾಖಲಿಸುತ್ತಿದ್ದಾರೆ. ಇದರಿಂದ ನಿಜವಾದ ಅರ್ಹ ಪರಿಶಿಷ್ಟರಿಗೆ ಅನ್ಯಾಯವಾಗಲಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

19ರಿಂದ ಎರಡನೇ ಹಂತದ ಸಮೀಕ್ಷೆ

ಎರಡನೇ ಹಂತದ ಸಮೀಕ್ಷಾ ಕಾರ್ಯ ಮೇ 19ರಿಂದ ಮೇ 21ರ ವರೆಗೆ ನಡೆಯಲಿದೆ. ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ನೀಡಲಾಗುತ್ತದೆ. ಈ ಹಂತದ ಸಮೀಕ್ಷೆಯಲ್ಲಿ ಗುರುತಿಸಿರುವ ಮತಗಟ್ಟೆ ಪ್ರದೇಶದಲ್ಲಿ ಏರ್ಪಡಿಸಲಾಗುವ ವಿಶೇಷ ಶಿಬಿರಗಳಿಗೆ ಪರಿಶಿಷ್ಟ ಜಾತಿಯವರು ತೆರಳಿ ಗಣತಿದಾರರಿಗೆ ಜಾತಿ ಕುರಿತು ಸ್ಪಷ್ಟ ಮಾಹಿತಿ ನೀಡಬಹುದು. ಮೂರನೇ ಹಂತದ ಸಮೀಕ್ಷೆ ಸ್ವಯಂ ಘೋಷಣೆಗೆ ಸಂಬಂಧಿಸಿದೆ.

ಇದು ಕೂಡ ಮೇ 19ರಿಂದ 21ರ ವರೆಗೆ ನಡೆಯಲಿದೆ. ಮೊದಲ ಎರಡು ಸಮೀಕ್ಷೆಗಳಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರುವವರು ಸ್ವಯಂ ಘೋಷಣೆ ಮೂಲಕ ಆನ್‌ಲೈನ್‌ ಮೂಲಕ ಮಾಹಿತಿ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಆಧಾರ್‌ ಸಂಖ್ಯೆ ಮತ್ತು ಜಾತಿ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆ ನೀಡುವುದು ಕಡ್ಡಾಯ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This