
ಬಾಗಲಕೋಟೆಯಲ್ಲಿ ಶನಿವಾರ ನಡೆದ ಛಲವಾದಿ ಸಮುದಾಯದ ಮಹಾಸಭಾ ಹಮ್ಮಿಕೊಂಡಿದ್ದ ಸಭೆಯಲ್ಲಿ ವಕೀಲ ಬಸವರಾಜ ಬದಾಮಿಯವರು ಒಳ ಮೀಸಲಾತಿ ಬಗ್ಗೆ ಸುವಿಸ್ತಾರವಾಗಿ ಮಾತನಾಡಿದರು
ಬಾಗಲಕೋಟೆ: ಒಳ ಮೀಸಲಾತಿಗಾಗಿ ನಿವೃತ್ತ ನ್ಯಾಯಮೂರ್ತಿ
ಎಚ್.ಎನ್. ನಾಗಮೋಹನದಾಸ್ ಆಯೋಗ ನಡೆಸುತ್ತಿರುವ ಸಮೀಕ್ಷೆಯಲ್ಲಿ ಬಲಗೈಗೆ ಸಂಬಂಧಿಸಿದ 37 ಉಪಜಾತಿಗಳವರು ಉಪಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಛಲವಾದಿ ಅಥವಾ ಹೊಲೆಯರ ಎಂದು ನಮೂದಿಸಬೇಕು ಎಂದು ರಾಜ್ಯ ಛಲವಾದಿ ಮಹಾಸಬಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಗರಸಂಗಿ ಹೇಳಿದರು.
ಜಾತಿಯಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಪ್ರಮಾಣ ಹಂಚಿಕೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಸದಾಶಿವ ಆಯೋಗ ಹಾಗೂ ಜೆ.ಸಿ. ಮಾಧುಸ್ವಾಮಿ ಸಮಿತಿಯ ವರದಿಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಲು ಹೊಸದಾಗಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳಲ್ಲಿ ಬಲಗೈನವರೇ ಹೆಚ್ಚಾಗಿದ್ದಾರೆ. ಸಮೀಕ್ಷೆಯಲ್ಲಿ ನಮ್ಮ ಸಂಖ್ಯೆ ನಿಖರವಾಗಿ ಗೊತ್ತಾಗಬೇಕಾದರೆ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಇದು ಜಾತಿ ಸಮೀಕ್ಷೆಯೇ ಹೊರತು ಧರ್ಮ ಸಮೀಕ್ಷೆಯಲ್ಲ. ಇಲ್ಲಿ ಧರ್ಮದ ಕಾಲಂ ಇರುವುದಿಲ್ಲ. ಕೆಲವರು ಬೌದ್ಧ ಧರ್ಮ ಎಂದು ನಮೂದಿಸಿ, ಜಾತಿ ಕಾಲಂನಲ್ಲಿ ಉಪ ಜಾತಿ ನಮೊದಿಸದಿದ್ದರೆ ಅಂತಹವರನ್ನು ಅಲ್ಪಸಂಖ್ಯಾತರ ಗುಂಪಿಗೆ ಸೇರಿಸಲಾಗುತ್ತದೆ ಈ ಬಗ್ಗೆ ಎಚ್ಚರಿಕೆ ಇರಲಿ’ ಎಂದು ವಕೀಲ ಬಸವರಾಜ ಬದಾಮಿ ಹೇಳಿದರು.
ಉಪ ಜಾತಿಗೆ ಸೇರಿದವರ ಸಂಖ್ಯೆಯಲ್ಲಿ ಏರುಪೇರಾಗಲಿದೆ. ಸರ್ಕಾರದಿಂದ ಸಿಗುವ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದರು.
ಪ್ರತಿ ಗ್ರಾಮದಲ್ಲಿಯೂ ಜಾಗೃತಿ ಮೂಡಿಸಲಾಗುವುದು. ಶಿಕ್ಷಕರು ಬಂದಾಗ ಮನೆಯಲ್ಲಿರದಿದ್ದರೆ, ಕಚೇರಿಗೆ ಹೋಗಿ ಮಾಹಿತಿ ನೀಡಬಹುದು. ಮೊಬೈಲ್ ಆ್ಯಪ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ಎಂ.ಎಚ್. ಚಲವಾದಿ ತಿಳಿಸಿದರು.
ರವಿ ಕಾಂಬಳೆ, ಪಡಿಯಪ್ಪ ಕಳ್ಳಿಮನಿ, ರವಿ ಬಬಲೇಶ್ವರ, ಶರಣಪ್ಪ ಬೇವೂರ, ಯಮನಪ್ಪ ಶಿರೂರ, ಸಂಗಪ್ಪ ಚಲವಾದಿ ಮಾತನಾಡಿದರು. ನಗರಸಭೆ ಸಭಾಪತಿ ಯಲ್ಲಪ್ಪ ನಾರಾಯಣಿ, ರಂಗಪ್ಪ ಕೋಟಿ ಉಪಸ್ಥಿತರಿದ್ದರು.







