Home » ಇತ್ತೀಚಿನ ಸುದ್ದಿ » ಇಂದು ದಾಖಲೆಯ 16ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

ಇಂದು ದಾಖಲೆಯ 16ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು:  ಇಂದು (ಮಾರ್ಚ್ 7 ಶುಕ್ರವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ . ಈಗಾಗಲೇ ಕರ್ನಾಟಕ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು,2025-26ನೇ ಆರ್ಥಿಕ ವರ್ಷಕ್ಕೆ ಸಿದ್ದು ಲೆಕ್ಕಾಚಾರ ಇಂದು ಮಂಡನೆಯಾಗಲಿದ್ದು, ಜನಸಾಮಾನ್ಯರಿಂದ ಹಿಡಿದು ಎಲ್ಲಾ ವರ್ಗದ ಜನರು ರಾಜ್ಯ ಬಜೆಟ್‌ ಅಧಿವೇಶನದತ್ತ ಚಿತ್ತ ಹರಿಸಿದ್ದಾರೆ.

ಈ ಬಾರಿಯ ಬಜೆಟ್ ಗಾತ್ರ ಇದೇ ಮೊದಲ ಬಾರಿಗೆ 4 ಲಕ್ಷ ಕೋಟಿ ಮೀರುವ ನಿರೀಕ್ಷೆಯಿದೆ. ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ಹೊಸ ನಿಯಮಗಳ ಜಾರಿ, ಮೂಲಸೌಕರ್ಯ ಅಭಿವೃದ್ಧಿ, ಬೆಂಗಳೂರಿನ ಅಭಿವೃದ್ಧಿ, ಬೆಲೆ ಏರಿಕೆಗೆ ಕಡಿವಾಣ ಕುರಿತು ಸಹಜವಾಗಿಯೇ ಜನರಲ್ಲಿ ಭಾರಿ ನಿರೀಕ್ಷೆಗಳಿವೆ.

ಇಂದು ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10:15ಕ್ಕೆ ಬಜೆಟ್‌ ಮಂಡನೆ ಆರಂಭಿಸಲಿದ್ದಾರೆ. ಅದಕ್ಕೂ ಮುನ್ನ ಬೆಳಗ್ಗೆ 9:45ಕ್ಕೆ ಆಯವ್ಯಯವನ್ನು ಅನುಮೋದಿಸಲು ಸಚಿವ ಸಂಪುಟದ ವಿಶೇಷ ಸಭೆ ನಡೆಸಲಿದ್ದಾರೆ. ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಈ ಸಭೆ ನಡೆಯಲಿದೆ. ಅಲ್ಲಿಂದ ನೇರವಾಗಿ ವಿಧಾನಸಭೆಯ ಸಭಾಂಗಣಕ್ಕೆ ತೆರಳಿ ಬಜೆಟ್‌ ಮಂಡಿಸಲಿದ್ದಾರೆ.

ಬಜೆಟ್‌ ಭಾಷಣದ ಮುನ್ನಾದಿನ ತಮ್ಮ ಬಜೆಟ್‌ ಕುರಿತಾಗಿ ಮಾತನಾಡಿದ ಸಿದ್ದರಾಮಯ್ಯ, ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ 7 ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ ಎಂದು ಒತ್ತಿ ಹೇಳಿದ್ದಾರೆ. ಕರ್ನಾಟಕದ ಪ್ರತಿಯೊಬ್ಬ ನಾಗರಿಕನು ಯಾವುದಾದರೂ ಸರ್ಕಾರಿ ಯೋಜನೆಯಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರದ ಪ್ರಾಮಾಣಿಕ ಪ್ರಯತ್ನವನ್ನು ಬಜೆಟ್ ಪ್ರತಿಬಿಂಬಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

2025-26ರ ಬಜೆಟ್‌ನ ಗಾತ್ರವು ಇದೇ ಮೊದಲ ಬಾರಿಗೆ 4 ಲಕ್ಷ ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಹಂಚಿಕೆ ಮಾಡಲಾದ 3.71 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This