2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಸೆಮಿಫೈನಲ್ಗೆ ಎ ಗುಂಪಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಅದೇರೀತಿ ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಈ 4 ತಂಡಗಳು ಅಧಿಕೃತವಾಗಿ ಎಂಟ್ರಿಕೊಟ್ಟಿವೆ.
ಸೆಮಿಫೈನಲ್ಗೇರಿದ ಆಫ್ರಿಕಾ
ಮಾರ್ಚ್ 1 ರ ಶನಿವಾರ ಕರಾಚಿಯಲ್ಲಿ ನಡೆದ ಗ್ರೂಪ್ ಬಿ ನ ಕೊನೆಯ ಪಂದ್ಯದ ಮೇಲೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸೆಮೀಸ್ ಹಾದಿ ನಿರ್ಧಾರವಾಗುತ್ತಿತ್ತು. ನಿನ್ನೆ ನಡೆದ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರಿಂದಾಗಿ, ಸೆಮಿಫೈನಲ್ ತಲುಪುವ ಅಫ್ಘನ್ ತಂಡದ ಆಸೆಗೆ ದೊಡ್ಡ ಹೊಡೆತ ಬಿದ್ದಿತ್ತು. ಆದಾಗ್ಯೂ ಅಫ್ಘನ್ ತಂಡಕ್ಕೆ ಕೊನೆಯ ಅವಕಾಶವಿತ್ತು. ಅದೆನೇಂದರೆ ಇಂದು ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಫ್ರಿಕಾ 210 ಕ್ಕೂ ಹೆಚ್ಚು ರನ್ಗಳಿಂದ ಹೀನಾಯವಾಗಿ ಸೋತರೆ ಮಾತ್ರ ಅಫ್ಘಾನಿಸ್ತಾನ ನೆಟ್ ರನ್ರೇಟ್ ಆದಾರದ ಮೇಲೆ ಸೆಮಿಫೈನಲ್ ತಲುಪಬಹುದಿತ್ತು.
ವಾಸ್ತವವಾಗಿ ಈ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಲಾ 3 ಅಂಕಗಳನ್ನು ಹೊಂದಿದ್ದವು. ಆದರೆ ನೆಟ್ ರನ್ ರೇಟ್ನಲ್ಲಿ ದಕ್ಷಿಣ ಆಫ್ರಿಕಾ ಬಹಳ ಮುಂದಿತ್ತು. ಅಂತಹ ಪರಿಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾ ಸೆಮಿಫೈನಲ್ ತಲುಪುವುದು ಬಹುತೇಕ ಖಚಿತವಾಗಿತ್ತು. ಆದಾಗ್ಯೂ ಇಂದಿನ ಪಂದ್ಯದಲ್ಲಿ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ 207 ರನ್ ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಸೋತಿದ್ದರೆ ಮಾತ್ರ ಅಫ್ಘಾನಿಸ್ತಾನಕ್ಕೆ ಸೆಮಿಫೈನಲ್ ಆಡುವ ಅವಕಾಶ ಸಿಗುತ್ತಿತ್ತು, ಆದರೆ ಇದಕ್ಕೆ ಅವಕಾಶ ನೀಡದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡವನ್ನು 200 ರ ಗಡಿ ದಾಟಲು ಅವಕಾಶ ನೀಡಲಿಲ್ಲ







