ಬೆಂಗಳೂರು,ಫೆಬ್ರವರಿ 25: ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಯಾಗುತ್ತಿದ್ದು, ಈ ಕುರಿತು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಮಾಧ್ಯಮಗಳ ಜೊತೆಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಮಾತನಾಡಿ, ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದಾರೆ. ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು. ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದು ಬೇಕಿಲ್ಲ. ಹೇಗಾದರು ಮಾಡಿ ಗ್ಯಾರಂಟಿ ಯೋಜನೆಗಳನ್ನು ಹತ್ತಿಕ್ಕಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲಿ ನಡೆಯಲಿದೆ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪರಮೇಶ್ವರ ಅವರು ಮಾಧ್ಯಮದವರನ್ನು ಪ್ರಶ್ನಿಸಿದರು. ಅದೆಲ್ಲ ಹೈಕಮಾಂಡ್ಗೆ ಬಿಡುವಂತದ್ದು. ಹೈಕಮಾಂಡ್ ಮತ್ತು ಅಧ್ಯಕ್ಷರ ಮಧ್ಯೆ ನಾವು ಪ್ರವೇಶ ಮಾಡುವುದಿಲ್ಲ ಎಂದರು.
ನಮ್ಮ ಉದ್ದೇಶ ಬಡವರಿಗೋಸ್ಕರ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ಬಡವರಿಗೆ ಹಣ ಕೊಡುವುದು ಬಿಜೆಪಿಯವರಿಗೆ ಮನಸ್ಸಿಲ್ಲ ಎಂದರೆ ಬಿಜೆಪಿಯವರ ಸಿದ್ಧಾಂತ ಏನಿದೆ ಎಂಬುದು ಅರ್ಥವಾಗುತ್ತದೆ. ಬಿಜೆಪಿಯವರು ಬಡವರ ಪರ ಇಲ್ಲ. ಪ್ರತಿಭಟನೆ ಮೂಲಕ ಸಾರ್ವಜನಿಕವಾಗಿ ಅದನ್ನು ಹೇಳಲು ಹೊರಟಿದ್ದಾರೆ. ಇದೆಲ್ಲವನ್ನು ಜನ ಗಮನಿಸುತ್ತಾರೆ ಎಂದು ಟೀಕಿಸಿದರು.
Source : Oneindia







