ಬೆಂಗಳೂರು :2025-26ನೇ ಆರ್ಥಿಕ ವರ್ಷ: ಸರ್ಕಾರಿ ನೌಕರರ ವೇತನ ಆದಾಯದ ಮೇಲಿನ ಆದಾಯ ತೆರಿಗೆ ವಸೂಲಿಗೆ ರಾಜ್ಯ ಸರ್ಕಾರ ಮಹತ್ವದ ಆದೇಶ
ಬೆಂಗಳೂರು:
2025-26ನೇ ಆರ್ಥಿಕ ವರ್ಷದಲ್ಲಿ ಸರ್ಕಾರಿ ನೌಕರರು ವೇತನದ ಆದಾಯದ ಮೇಲೆ ಪಾವತಿಸಬೇಕಾಗುವ ಆದಾಯ ತೆರಿಗೆಯನ್ನು ವೇತನ ಆದಾಯ ಮೂಲದಿಂದಲೇ (TDS) ವಸೂಲು ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.
ಆದಾಯ ತೆರಿಗೆ ಕಾಯಿದೆ ಕಲಂ 115BAC ರಡಿ ದಿನಾಂಕ 01-04-2020ರಿಂದ ಅನ್ವಯವಾಗುವಂತೆ ಹೊಸ ಆದಾಯ ತೆರಿಗೆ ವಿಧಾನವನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ತೆರಿಗೆ ದರಗಳಲ್ಲಿ ರಿಯಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ 2020-21ನೇ ಆರ್ಥಿಕ ವರ್ಷದಿಂದ ಎರಡು ಆದಾಯ ತೆರಿಗೆ ವಿಧಾನಗಳು ಜಾರಿಯಲ್ಲಿವೆ.
ಒಂದು ವಿಧಾನವು ನಿಯಮಾನುಸಾರ ಅನ್ವಯವಾಗುವ ಎಲ್ಲಾ ಕಡಿತಗಳು ಮತ್ತು ವಿನಾಯಿತಿಗಳನ್ನು ಒಳಗೊಂಡ ಹಳೆಯ ಆದಾಯ ತೆರಿಗೆ ವಿಧಾನವಾಗಿದ್ದು, ಮತ್ತೊಂದು ವಿಧಾನವು ಕಲಂ 115BAC ರಡಿ ನಿರ್ದಿಷ್ಟ ಕಡಿತ ಹಾಗೂ ವಿನಾಯಿತಿಗಳನ್ನು ಕೈಬಿಟ್ಟು ಜಾರಿಗೆ ತಂದಿರುವ ಹೊಸ ಆದಾಯ ತೆರಿಗೆ ವಿಧಾನವಾಗಿದೆ.
ಹೊಸ ತೆರಿಗೆ ವಿಧಾನವೇ ಡೀಫಾಲ್ಟ್ ವ್ಯವಸ್ಥೆ
2023-24ನೇ ಆರ್ಥಿಕ ವರ್ಷದಿಂದ ಆದಾಯ ತೆರಿಗೆ ಕಾಯಿದೆ ಕಲಂ 115BAC ಗೆ ಉಪನಿಯಮ (1A) ಸೇರಿಸಲಾಗಿದ್ದು, ಅದರಂತೆ ಹೊಸ ಆದಾಯ ತೆರಿಗೆ ವಿಧಾನವನ್ನು ಪೂರ್ವನಿಯೋಜಿತ (DEFAULT) ವಿಧಾನವಾಗಿ ಘೋಷಿಸಲಾಗಿದೆ.
ಆದರೆ, ಇಚ್ಛಿಸಿದ ಸರ್ಕಾರಿ ನೌಕರರು ಹಳೆಯ ಆದಾಯ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಕಲಂ 115BAC(1) ರಡಿ ಅವಕಾಶ ನೀಡಲಾಗಿದೆ.
ನವೆಂಬರ್ 25ರೊಳಗೆ ಲಿಖಿತ ಆಯ್ಕೆ ಕಡ್ಡಾಯ
ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ನೌಕರರು ಹಳೆಯ ಆದಾಯ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸಿದಲ್ಲಿ, ಅವರು ತಮ್ಮ ವೇತನವನ್ನು ತೆಗೆಯುವ ಮತ್ತು ವಿತರಿಸುವ ಅಧಿಕಾರಿಗಳಿಗೆ ದಿನಾಂಕ 25-11-2025ರೊಳಗೆ ಲಿಖಿತವಾಗಿ ತಿಳಿಸಬೇಕಾಗಿದೆ.
ಹಳೆಯ ಹಾಗೂ ಹೊಸ ಆದಾಯ ತೆರಿಗೆ ವಿಧಾನಗಳಿಗೆ ಅನ್ವಯಿಸುವ ತೆರಿಗೆ ದರಗಳು ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಅನುಬಂಧ–III ನಲ್ಲಿ ವಿವರಿಸಲಾಗಿದೆ.
ಹೊಸ ತೆರಿಗೆ ವಿಧಾನದಲ್ಲಿ ಅನ್ವಯವಾಗದ ಕಡಿತಗಳು
ಕಲಂ 115BAC ರಡಿ ಹೊಸ ಆದಾಯ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಂಡಿರುವ ನೌಕರರಿಗೆ ಕೆಳಕಂಡ ಕಡಿತ ಹಾಗೂ ವಿನಾಯಿತಿಗಳು ಅನ್ವಯವಾಗುವುದಿಲ್ಲ:
ವೃತ್ತಿ ತೆರಿಗೆ
ಮನೆ ಬಾಡಿಗೆ ಭತ್ಯೆ (HRA)
ಇತರ ವಿಶೇಷ ಭತ್ಯೆಗಳು [ಕಲಂ 10(14)]
ಸ್ವಂತ ವಾಸಕ್ಕಾಗಿ ಮನೆ ಕಟ್ಟಲು ಅಥವಾ ಖರೀದಿಸಲು ಪಡೆದ ಸಾಲದ ಮೇಲಿನ ಬಡ್ಡಿ [ಕಲಂ 24]
ಚ್ಯಾಪ್ಟರ್ VIA ಅಡಿಯಲ್ಲಿ ದೊರಕುವ ವಿನಾಯಿತಿಗಳು
(ಕಲಂ 80CCD(2) ಮತ್ತು 80JJAA ಹೊರತುಪಡಿಸಿ)
ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ
ಆದರೆ, 2023-24ನೇ ಆರ್ಥಿಕ ವರ್ಷದಿಂದ ಹೊಸ ಆದಾಯ ತೆರಿಗೆ ವಿಧಾನಕ್ಕೂ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಸ್ಟಾಂಡರ್ಡ್ ಡಿಡಕ್ಷನ್ ಹಾಗೂ ತೆರಿಗೆ ದರಗಳ ವಿವರಗಳನ್ನು ಕೂಡ ಅನುಬಂಧ–III ನಲ್ಲಿ ನೀಡಲಾಗಿದೆ.
ಹಳೆಯ ವಿಧಾನ ಆಯ್ಕೆ ಮಾಡಿದವರಿಗೆ 12BB ನಮೂನೆ ಕಡ್ಡಾಯ
ಹಳೆಯ ಆದಾಯ ತೆರಿಗೆ ವಿಧಾನದಲ್ಲಿ ಮುಂದುವರೆಯಲು ಇಚ್ಛಿಸುವ ನೌಕರರು, ವೇತನದಿಂದ ಆಗುವ ಕಡಿತಗಳನ್ನು ಹೊರತುಪಡಿಸಿ ತಮ್ಮ ಉಳಿತಾಯದ ವಿವರಗಳನ್ನು ಅಗತ್ಯ ದಾಖಲೆಗಳೊಂದಿಗೆ ನಮೂನೆ 12BB ರಲ್ಲಿ ಸಲ್ಲಿಸಬೇಕಾಗಿದೆ.
ಈ ಆದೇಶದಿಂದ ಸರ್ಕಾರಿ ನೌಕರರು ತಮ್ಮ ಆದಾಯ ತೆರಿಗೆ ಯೋಜನೆಯನ್ನು ಮುಂಚಿತವಾಗಿ ರೂಪಿಸಿಕೊಳ್ಳಲು ಹಾಗೂ ಸೂಕ್ತ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಲಿದೆ.







