Home » ಕ್ರೀಡೆಗಳು » 2027 ವಿಶ್ವಕಪ್‌ನಲ್ಲಿ ರೋ–ಕೊ ಆಡಲಾರರೇ? 2026ರ ಪ್ರದರ್ಶನವೇ ನಿರ್ಣಾಯಕ

2027 ವಿಶ್ವಕಪ್‌ನಲ್ಲಿ ರೋ–ಕೊ ಆಡಲಾರರೇ? 2026ರ ಪ್ರದರ್ಶನವೇ ನಿರ್ಣಾಯಕ

ನವದೆಹಲಿ:ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡಲಾರರೇ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರ ಇತ್ತೀಚಿನ ಬ್ಯಾಟಿಂಗ್ ಫಾರ್ಮ್‌ನ್ನು ಗಮನಿಸಿದರೆ, ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಆದರೆ ಅಂತಿಮವಾಗಿ 2026ರಲ್ಲಿ ಇವರ ಪ್ರದರ್ಶನ ಯಾವ ಮಟ್ಟದಲ್ಲಿರುತ್ತದೆ ಎಂಬುದೇ ಪ್ರಮುಖ ಅಂಶವಾಗಲಿದೆ.
ರೋಹಿತ್–ಕೊಹ್ಲಿ ಜೋಡಿಯ ಬ್ಯಾಟಿಂಗ್ ಫಾರ್ಮ್, ದೈಹಿಕ ಕ್ಷಮತೆ (ಫಿಟ್ನೆಸ್) ಹಾಗೂ ನಿರಂತರತೆ ಎಲ್ಲವೂ ಆಯ್ಕೆ ಪ್ರಕ್ರಿಯೆಯಲ್ಲಿ ಮಹತ್ವ ಪಡೆಯಲಿದೆ. ಇದಕ್ಕಿಂತಲೂ ಮುಖ್ಯವಾಗಿ 2026ರಲ್ಲಿ ಇವರಿಗೆ ಎಷ್ಟು ಏಕದಿನ ಪಂದ್ಯಗಳನ್ನು ಆಡಲು ಅವಕಾಶ ಸಿಗುತ್ತದೆ ಮತ್ತು ಆ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೂ ವಿಶ್ವಕಪ್ ಆಯ್ಕೆಗೆ ಪ್ರಮುಖ ಮಾನದಂಡವಾಗಲಿದೆ.
2026ರಲ್ಲಿ 18 ಏಕದಿನ ಪಂದ್ಯಗಳು
ಈಗಿನ ಕ್ರಿಕೆಟ್ ವೇಳಾಪಟ್ಟಿಯ ಪ್ರಕಾರ, ಭಾರತ ತಂಡವು 2026ರಲ್ಲಿ ಒಟ್ಟು 18 ಏಕದಿನ ಪಂದ್ಯಗಳನ್ನು ಆಡಲಿದೆ. ಇವು ತಲಾ ಮೂರು ಪಂದ್ಯಗಳಂತೆ ಆರು ಸರಣಿಗಳಾಗಿವೆ. ನ್ಯೂಜಿಲ್ಯಾಂಡ್ ವಿರುದ್ಧ ಎರಡು ಸರಣಿಗಳು ನಡೆಯಲಿದ್ದು, ಅಫ್ಘಾನಿಸ್ಥಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧ ತಲಾ ಒಂದೊಂದು ಸರಣಿಯನ್ನು ಭಾರತ ಆಡಲಿದೆ.
ಈ ಸರಣಿಗಳಲ್ಲಿ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳು ಅವರದೇ ನೆಲದಲ್ಲಿ ನಡೆಯಲಿವೆ. ಬಾಂಗ್ಲಾದೇಶ ಪ್ರವಾಸದ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ; ಅದು ತೂಗುಯ್ಯಾಲೆಯಲ್ಲಿದೆ.
ಎಲ್ಲ ಸರಣಿಗಳಲ್ಲೂ ರೋ–ಕೊ ಆಡುವುದೇ?
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈ ಎಲ್ಲ ಸರಣಿಗಳಲ್ಲೂ ಆಡುತ್ತಾರೆ ಎನ್ನುವುದು ಅನುಮಾನ. ವಿಶೇಷವಾಗಿ ಅಫ್ಘಾನಿಸ್ಥಾನ ವಿರುದ್ಧದ ಸರಣಿಯಲ್ಲಿ ಇವರಿಬ್ಬರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಆದರೂ ಕನಿಷ್ಠ 12ರಿಂದ 15 ಏಕದಿನ ಪಂದ್ಯಗಳನ್ನು ಆಡಲಿದ್ದಾರೆ ಎನ್ನುವುದರಲ್ಲಿ ಸಂದೇಹವಿಲ್ಲ.
ಈ ಪಂದ್ಯಗಳಲ್ಲಿ ರನ್‌ಗಳ ಸುರಿಮಳೆಗೈದು, ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರೆ, ಕೊಹ್ಲಿ ಹಾಗೂ ರೋಹಿತ್ ಶರ್ಮಾ 2027ರ ವಿಶ್ವಕಪ್ ತಂಡಕ್ಕೆ ನೇರವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಹೀಗಾಗಿ 2026ರ ಏಕದಿನ ಸರಣಿಗಳು ಈ ಇಬ್ಬರು ದಿಗ್ಗಜರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ವರ್ಷವಾಗಲಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This