ಬುಲವಾಯೊ:ಭಾರತದ ಅಂಡರ್–19 ಕ್ರಿಕೆಟ್ ತಂಡದ 14 ವರ್ಷದ ಪ್ರತಿಭಾವಂತ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ U19 ವಿಶ್ವಕಪ್ 2026ರ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಚಿನ್ನದ ಅಕ್ಷರಗಳಲ್ಲಿ ಬರೆಯಿಸಿಕೊಂಡಿದ್ದಾರೆ.
ಕೇವಲ 14 ವರ್ಷ ಮತ್ತು 296 ದಿನಗಳ ವಯಸ್ಸಿನಲ್ಲಿ ಪುರುಷರ U19 ವಿಶ್ವಕಪ್ ಪಂದ್ಯದಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ವೈಭವ್ ಪಾತ್ರರಾದರು. ಈ ಮೂಲಕ ಅವರು ಅಫ್ಗಾನಿಸ್ತಾನದ ಶಾಹಿದುಲ್ಲಾ ಕಮಾಲ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು.
ಸ್ಫೋಟಕ ಆರಂಭ, ವೇಗದ ಅರ್ಧಶತಕ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದ ವೈಭವ್, ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಒಟ್ಟು 67 ಎಸೆತಗಳಲ್ಲಿ 72 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.
ಹಳೆಯ ದಾಖಲೆಗಳಿಗೆ ವಿದಾಯ
ಈ ಮೊದಲು ಈ ದಾಖಲೆ ಅಫ್ಗಾನಿಸ್ತಾನದ ಶಾಹಿದುಲ್ಲಾ ಕಮಾಲ್ ಅವರ ಹೆಸರಿನಲ್ಲಿತ್ತು. ಅವರು 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 15 ವರ್ಷ ಮತ್ತು 19 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸಿದ್ದರು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಕೂಡ ಸೇರಿದ್ದು, ಅವರು 2010ರಲ್ಲಿ 15 ವರ್ಷ ಮತ್ತು 92 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ್ದರು.
ಪುರುಷರ U19 ವಿಶ್ವಕಪ್‌ನಲ್ಲಿ 50+ ಸ್ಕೋರ್ ಮಾಡಿದ ಅತಿ ಕಿರಿಯ ಆಟಗಾರರು
14 ವರ್ಷ, 296 ದಿನ – ವೈಭವ್ ಸೂರ್ಯವಂಶಿ (ಭಾರತ) vs ಬಾಂಗ್ಲಾದೇಶ, ಬುಲವಾಯೊ, 2026
15 ವರ್ಷ, 19 ದಿನ – ಶಾಹಿದುಲ್ಲಾ ಕಮಾಲ್ (ಅಫ್ಗಾನಿಸ್ತಾನ) vs ವೆಸ್ಟ್ ಇಂಡೀಸ್, 2014
15 ವರ್ಷ, 92 ದಿನ – ಬಾಬರ್ ಅಜಮ್ (ಪಾಕಿಸ್ತಾನ) vs ವೆಸ್ಟ್ ಇಂಡೀಸ್, 2010
15 ವರ್ಷ, 125 ದಿನ – ಪರ್ವೇಜ್ ಮಲಿಕ್‌ಜೈ (ಅಫ್ಗಾನಿಸ್ತಾನ) vs ಫಿಜಿ, 2016
15 ವರ್ಷ, 132 ದಿನ – ಶರದ್ ವೆಸಾವ್ಕರ್ (ನೇಪಾಳ) vs ಇಂಗ್ಲೆಂಡ್, 2004
ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ವೈಭವ್
ಯೂತ್ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಈಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ವೈಭವ್ ಸೂರ್ಯವಂಶಿ – 20 ಪಂದ್ಯಗಳಲ್ಲಿ 1,047 ರನ್
ವಿರಾಟ್ ಕೊಹ್ಲಿ – 28 ಪಂದ್ಯಗಳಲ್ಲಿ 978 ರನ್
ಭಾರತ ಪರ ಈ ಪಟ್ಟಿಯಲ್ಲಿ ವಿಜಯ್ ಜೋಲ್ 36 ಪಂದ್ಯಗಳಲ್ಲಿ 1,404 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶದ ನಜ್ಮುಲ್ ಹೊಸೈನ್ ಶಾಂಟೊ 1,820 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಭಾರತೀಯ ಕ್ರಿಕೆಟ್‌ಗೆ ಹೊಸ ಭರವಸೆ
ಅತ್ಯಂತ ಕಿರಿಯ ವಯಸ್ಸಿನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ವೈಭವ್ ಸೂರ್ಯವಂಶಿ,b ಭಾರತೀಯ ಕ್ರಿಕೆಟ್‌ಗೆ ಹೊಸ ಭರವಸೆಯಾಗಿ ಮೂಡಿಬರುತ್ತಿದ್ದಾರೆ. ಅವರ ನಿರ್ಭೀತ ಬ್ಯಾಟಿಂಗ್ ಶೈಲಿ ಹಾಗೂ ತಾಂತ್ರಿಕ ಸಾಮರ್ಥ್ಯ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಆಸ್ತಿ ಆಗಲಿದೆ ಎಂಬ ವಿಶ್ವಾಸ ಕ್ರಿಕೆಟ್ ವಲಯದಲ್ಲಿ ವ್ಯಕ್ತವಾಗಿದೆ.







