Home » ರಾಜ್ಯ » ಹೈಕಮಾಂಡ್ ಭೇಟಿಗೆ ಸಮಯ ಸಿಗದೆ ಡಿಕೆಶಿ ಅಸಮಾಧಾನ; ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ತೀವ್ರ

ಹೈಕಮಾಂಡ್ ಭೇಟಿಗೆ ಸಮಯ ಸಿಗದೆ ಡಿಕೆಶಿ ಅಸಮಾಧಾನ; ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ತೀವ್ರ

ಬೆಂಗಳೂರು, ಡಿ.24:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸುತ್ತಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಡಿಕೆಶಿ ಭೇಟಿಗೆ ಸಮಯ ನೀಡದಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಸಚಿವರೊಂದಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸುವ ನೆಪದಲ್ಲಿ ದೆಹಲಿಗೆ ತೆರಳಿರುವ ಡಿಕೆಶಿ, ಪಕ್ಷದ ವರಿಷ್ಠರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಸ್ಥಿತಿಗತಿಯ ಬಗ್ಗೆ ಮಾತುಕತೆ ನಡೆಸಲು ಪ್ರಯತ್ನಿಸಿದರೂ ಯಶಸ್ಸು ದೊರೆತಿಲ್ಲ. ಕಳೆದ ತಿಂಗಳ ದೆಹಲಿ ಭೇಟಿಯಲ್ಲೂ ರಾಹುಲ್ ಗಾಂಧಿ ಸಮಯ ನೀಡಿರಲಿಲ್ಲ ಎನ್ನಲಾಗಿದೆ.
ಅಧಿಕಾರ ಹಂಚಿಕೆ ಕುರಿತ ಒಪ್ಪಂದ ಜಾರಿಗೆ ಪಟ್ಟು ಹಿಡಿದಿರುವ ಡಿಕೆಶಿ ನಡೆ ಪಕ್ಷದೊಳಗೆ ಗೊಂದಲಕ್ಕೆ ಕಾರಣವಾಗಿದ್ದು, ವರಿಷ್ಠ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಡಿಕೆಶಿ ಭೇಟಿಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ನಡುವೆ ಮಾಜಿ ಸಚಿವ ಕೆ.ಎನ್.ರಾಜಣ್ಣ ರಾಹುಲ್ ಗಾಂಧಿಗೆ ಪತ್ರ ಬರೆದು ಡಿಕೆಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಕಾಂಗ್ರೆಸ್ ಒಳರಾಜಕೀಯ ಮತ್ತಷ್ಟು ತೀವ್ರವಾಗಿದೆ. ಇದೇ ತಿಂಗಳ 27ರಂದು ನಡೆಯಲಿರುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಭಾಗವಹಿಸುವ ಸಾಧ್ಯತೆ ಇದ್ದು, ಆ ವೇಳೆ ಅಧಿಕಾರ ಹಂಚಿಕೆ ಕುರಿತ ಚರ್ಚೆಗೆ ಡಿಕೆಶಿ ಹಠ ಹಿಡಿದಿದ್ದಾರೆ.
ಆದರೆ “ಗೊಂದಲ ಸೃಷ್ಟಿಸಿರುವುದು ಹೈಕಮಾಂಡ್ ಅಲ್ಲ, ರಾಜ್ಯ ನಾಯಕರು ತಾವೇ ಬಗೆಹರಿಸಿಕೊಳ್ಳಬೇಕು” ಎಂಬ ಖರ್ಗೆ ಹೇಳಿಕೆ ಡಿಕೆಶಿ ಬಣಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ಹೈಕಮಾಂಡ್ ಎದುರು ಅಂತಿಮ ಮಾತುಕತೆಗೆ ಅವಕಾಶ ಕಲ್ಪಿಸಿಕೊಳ್ಳಲು ಡಿಕೆಶಿ ಮುಂದುವರಿದ ಪ್ರಯತ್ನ ನಡೆಸುತ್ತಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This