ಔರಾದ್ ಪಟ್ಟಣದಲ್ಲಿ ಅಲೆಮಾರಿ – ಅರೆ ಅಲೆಮಾರಿ ಸಮುದಾಯದವರ ಮೂಲಭೂತ ಹಕ್ಕುಗಳಿಗಾಗಿ ನಡೆಸುತ್ತಿರುವ ಮುಗಲಾರದ ಅಹೋರಾತ್ರಿ ಅಂಧೋಲನ ಮುಂದುವರಿದಿದೆ. ಸರ್ಕಾರದಿಂದ ಮಂಜೂರಾದ ನಿವೇಶನಗಳನ್ನು ಕೂಡಲೇ ಹಂಚಿಕೆ ಮಾಡಬೇಕು, ವರ್ಷಗಳಿಂದ ಅನುಭವಿಸುತ್ತಿರುವ ಅನ್ಯಾಯಕ್ಕೆ ಅಂತ್ಯ ಮಾಡಬೇಕು ಎಂಬ ಆಗ್ರಹದೊಂದಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಬೀದಿ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ವರ್ಷಗಳಿಂದ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಅರೆ ಅಲೆಮಾರಿ ಸಮುದಾಯದ ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ತಮ್ಮ ಬದುಕಿನ ನೋವು–ನಲಿವುಗಳನ್ನು ಹೊರಹಾಕುತ್ತಾ ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾರೆ. “ನಮಗೆ ನಮ್ಮ ಹಕ್ಕು ಒದಗಿಸುವವರೆಗೂ ಈ ಹೋರಾಟ ನಿಲ್ಲದು” ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಎಪಿಎಂಸಿ ಆವರಣದಿಂದ ತಹಸೀಲ್ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಿದ ಸಮುದಾಯದವರು, ನಂತರ ತಹಸೀಲ್ ಕಚೇರಿ ಎದುರಿನ ಸಭಾ ಮಂಟಪದ ಮೇಲೆ ಅಹೋರಾತ್ರಿ ಧರಣಿಗೆ ಕುಳಿತಿದ್ದಾರೆ. ಧರಣಿ ಸ್ಥಳದಲ್ಲಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಪಾಲ್ಗೊಂಡಿದ್ದು, ಈ ಹೋರಾಟಕ್ಕೆ ಹೆಚ್ಚಿನ ಬಲ ನೀಡಿದೆ.
ನ್ಯಾಯಕ್ಕಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ಹಾಗೂ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಸಮುದಾಯದ ಪ್ರತಿನಿಧಿಗಳು ತಮ್ಮ ಬೇಡಿಕೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಆದರೆ, ಭರವಸೆ ಮಾತ್ರ ಸಾಕಾಗದು, ಲಿಖಿತ ಆದೇಶ ಹಾಗೂ ಸ್ಪಷ್ಟ ಕ್ರಮ ಕೈಗೊಳ್ಳುವವರೆಗೂ ಧರಣಿ ಮುಂದುವರಿಯುತ್ತದೆ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ.ಅಲೆಮಾರಿ – ಅರೆ ಅಲೆಮಾರಿ ಸಮುದಾಯದ ಬದುಕು ಭದ್ರವಾಗಲು ಶಾಶ್ವತ ವಸತಿ, ಮೂಲ ಸೌಲಭ್ಯಗಳು ಹಾಗೂ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿದೆ.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮಾತನಾಡಿ, ಅರೆ ಅಲೆಮಾರಿ ಸಮುದಾಯದ ಸಮಸ್ಯೆಗಳು ವರ್ಷಗಳಿಂದ ಬಾಕಿಯೇ ಉಳಿದಿದ್ದು, ಇನ್ನು ಮುಂದೆ ಸರ್ಕಾರ ಮೌನ ವಹಿಸಬಾರದು ಎಂದು ಎಚ್ಚರಿಸಿದರು. ನ್ಯಾಯ ಸಿಗುವವರೆಗೂ ಹೋರಾಟ ತೀವ್ರಗೊಳ್ಳಲಿದೆ ಎಂದು ಅವರು ಹೇಳಿದರು.
ಧರಣಿಯಲ್ಲಿ ಅಲೆಮಾರಿ ಸಮುದಾಯದ ಮುಖಂಡ ನಾಗನಾಥ ವಾಕೋಡೆ, ಒಕ್ಕೂಟದ ಪ್ರಮುಖರಾದ ಸುಭಾಷ ಲಾಧಾ, ಸಿದ್ದಾರ್ಥ ಭೋಸ್ಲೆ, ಸಂತೋಷ ಸಿಂಧೆ, ಪ್ರವೀಣ ಕಾರಂಜೆ, ಸಂತೋಷ ಸೂರ್ಯವಂಶಿ, ಪ್ರವೀಣ್ ಕಾರಂಜೆ, ಸಂಪತ್ ಫೈಟರ್, ಸುಂದರ ಮೇತ್ರೆ, ಸೇರಿದಂತೆ ಅಲೆಮಾರಿ ಸಮುದಾಯದವರು ಮಹಿಳೆಯರು, ಮಕ್ಕಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.







