ಬೆಂಗಳೂರು :ಕರ್ನಾಟಕ ವಿಧಾನ ಪರಿಷತ್ತಿನ 2026ರ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಅಧಿಕೃತ ಅನುಮೋದನೆ ನೀಡಿದ್ದಾರೆ.
ಪಕ್ಷದ ಉನ್ನತ ನಾಯಕತ್ವದೊಂದಿಗೆ ಚರ್ಚೆ ನಡೆಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಂಘಟನೆ ಬಲ, ಕ್ಷೇತ್ರದ ಅನುಭವ ಹಾಗೂ ಪಕ್ಷದ ನಿಷ್ಠೆಯನ್ನು ಆಧಾರವಾಗಿ ಇಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅನುಮೋದಿತ ಅಭ್ಯರ್ಥಿಗಳ ಪಟ್ಟಿ:
ಪಶ್ಚಿಮ ಪದವೀಧರ ಕ್ಷೇತ್ರ: ಚಚ ಮೋಹನ್ ಲಿಂಬಿಕಾಯಿ
ಆಗ್ನೇಯ ಪದವೀಧರ ಕ್ಷೇತ್ರ: ಶಶಿ ಹುಲಿಕುಂಟೆ
ಈಶಾನ್ಯ ಶಿಕ್ಷಕರ ಕ್ಷೇತ್ರ: ಶರಣಪ್ಪ ಮಟ್ಟೂರ್
ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ
ಈ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೀರ್ಘಕಾಲದ ಸಾರ್ವಜನಿಕ ಸೇವೆ, ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳ ಬಗ್ಗೆ ಆಳವಾದ ಅರಿವು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ವಿಧಾನ ಪರಿಷತ್ ಚುನಾವಣೆಗಳು ಪಕ್ಷದ ಸಂಘಟನೆಗೆ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳು, ಶಿಕ್ಷಕರ ಹಕ್ಕುಗಳು, ಪದವೀಧರ ಯುವಕರ ಉದ್ಯೋಗಾವಕಾಶಗಳು ಹಾಗೂ ಸಾಮಾಜಿಕ ನ್ಯಾಯದ ವಿಚಾರಗಳನ್ನು ಪ್ರಮುಖ ಅಸ್ತ್ರವಾಗಿಸಿಕೊಂಡು ಚುನಾವಣೆಗೆ ಕಾಂಗ್ರೆಸ್ ಮುಂದಾಗಲಿದೆ ಎಂದು ತಿಳಿದುಬಂದಿದೆ.
ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಲಿದ್ದು, ರಾಜ್ಯ ಸರ್ಕಾರದ ಜನಪರ ಯೋಜನೆಗಳು ಹಾಗೂ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಟ್ಟು ಮತಯಾಚನೆ ನಡೆಸಲಿದ್ದಾರೆ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಬಲವನ್ನು ಇನ್ನಷ್ಟು ವೃದ್ಧಿಸುವ ಉದ್ದೇಶದಿಂದ ಪಕ್ಷ ಗಂಭೀರವಾಗಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ.







