ಉಡುಪಿ, ಡಿ.31: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗದಿಂದ ವಿಕಲಚೇತನ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸಕಾಲ ಸಂಬಂಧಿತ ಸೇವೆಯಾದ ರಿಯಾಯಿತಿ ದರದ ಬಸ್‌ಪಾಸು ವ್ಯವಸ್ಥೆಯನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸಲಾಗುತ್ತಿದೆ. ಈ ಯೋಜನೆಯಡಿ ವಿಕಲಚೇತನ ಪ್ರಯಾಣಿಕರು ತಮ್ಮ ವಾಸಸ್ಥಳದಿಂದ 100 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣಿಸುವಂತೆ ಬಸ್‌ಪಾಸುಗಳನ್ನು ವಿತರಿಸಲಾಗುತ್ತಿದೆ.
2025ನೇ ಸಾಲಿನಲ್ಲಿ ವಿತರಿಸಲಾದ ವಿಕಲಚೇತನರ ರಿಯಾಯಿತಿ ಬಸ್‌ಪಾಸುಗಳ ಅವಧಿ ಡಿಸೆಂಬರ್ 31ರಂದು ಮುಕ್ತಾಯಗೊಳ್ಳಲಿದ್ದು, 2026ನೇ ಸಾಲಿಗಾಗಿ ಈ ಬಸ್‌ಪಾಸುಗಳನ್ನು ಜನವರಿ 1ರಿಂದ ನವೀಕರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಹೊಸ ಬಸ್‌ಪಾಸುಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ನಿಗಮ ತಿಳಿಸಿದೆ.
ಫಲಾನುಭವಿಗಳಿಗೆ ಯಾವುದೇ ಅಸೌಕರ್ಯ ಉಂಟಾಗದಂತೆ, 2025ನೇ ಸಾಲಿನಲ್ಲಿ ವಿತರಿಸಲಾದ ವಿಕಲಚೇತನರ ರಿಯಾಯಿತಿ ಬಸ್‌ಪಾಸುಗಳನ್ನು 2026ರ ಫೆಬ್ರವರಿ 28ರವರೆಗೆ ಮಾನ್ಯವಾಗಿರುವಂತೆ ನಿರ್ಧರಿಸಲಾಗಿದೆ. ಈ ಅವಧಿಯೊಳಗೆ ಫಲಾನುಭವಿಗಳು ತಮ್ಮ ಬಸ್‌ಪಾಸುಗಳನ್ನು ನವೀಕರಿಸಿಕೊಳ್ಳಬಹುದಾಗಿದೆ.
ವಿಕಲಚೇತನರ ರಿಯಾಯಿತಿ ದರದ ಬಸ್‌ಪಾಸು ಪಡೆಯಲು ಸೇವಾಸಿಂಧು ಪೋರ್ಟಲ್
(https://sevasindhuservices.karnataka.gov.in) ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಒಂದು ಸ್ಟಾಂಪ್ ಸೈಜಿನ ಹಾಗೂ ಎರಡು ಪಾಸ್‌ಪೋರ್ಟ್ ಸೈಜಿನ ಇತ್ತೀಚಿನ ಭಾವಚಿತ್ರಗಳು, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನೀಡಲಾಗಿರುವ ಗುರುತಿನ ಚೀಟಿಯ ಮೂಲಪ್ರತಿ (ಮಾನ್ಯತಾ ಅವಧಿ ಮುಗಿದಿರಬಾರದು) ಅಥವಾ ಹೊಸದಾಗಿ ನೀಡಲಾಗಿರುವ ಯುಡಿಐಡಿ (UDID) ಕಾರ್ಡಿನ ಮೂಲಪ್ರತಿ ಹಾಗೂ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್‌ನ ಮೂಲಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಫಲಾನುಭವಿಗಳು ಮೇಲ್ಕಂಡ ದಾಖಲೆಗಳನ್ನು ಜೆಪಿಇಜಿ ಅಥವಾ ಪಿಡಿಎಫ್ ನಮೂನೆಯಲ್ಲಿ ಸೇವಾಸಿಂಧು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಜೊತೆಗೆ ಸಂಬಂಧಿತ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಿ, ಬಸ್‌ಪಾಸು ಶುಲ್ಕವಾಗಿ 660 ರೂ.ಗಳನ್ನು ಪಾವತಿಸಿದ ಬಳಿಕ ರಿಯಾಯಿತಿ ಬಸ್‌ಪಾಸುಗಳನ್ನು ಪಡೆಯಬಹುದು.
ವಿಕಲಚೇತನರ ರಿಯಾಯಿತಿ ಬಸ್‌ಪಾಸುಗಳನ್ನು ನವೀಕರಿಸಿಕೊಳ್ಳಲು ಫೆಬ್ರವರಿ 28 ಕೊನೆಯ ದಿನವಾಗಿದ್ದು, ನಿಗದಿತ ಅವಧಿಯೊಳಗೆ ಫಲಾನುಭವಿಗಳು ಪಾಸುಗಳನ್ನು ನವೀಕರಿಸಿಕೊಳ್ಳುವಂತೆ ಮಂಗಳೂರು ಕೆಎಸ್‌ಆರ್‌ಟಿಸಿ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







