ಔರಾದ್ ಪಟ್ಟಣದ ಬೀದಿ ಬದಿಗಳಲ್ಲಿ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗಕ್ಕೆ ಸರ್ಕಾರದಿಂದ ಮಂಜೂರಾದ ನಿವೇಶನಗಳನ್ನು ಕೂಡಲೇ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನವೂ ತೀವ್ರಗೊಂಡು ಮುಂದುವರಿಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ನಡೆಯುತ್ತಿರುವ ಧರಣಿ ಸ್ಥಳಕ್ಕೆ ಕಳೆದ ಮೂರು ದಿನಗಳಿಂದ ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡುತ್ತಾ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, “ನಮಗೆ ಬರೀ ಭರವಸೆ ಬೇಡ. ನಿವೇಶನ ಹಂಚಿಕೆಗೆ ಸಂಬಂಧಿಸಿದ ಲಿಖಿತ ಆದೇಶ ನಮ್ಮ ಕೈಗೆ ಸಿಕ್ಕರೆ ಮಾತ್ರ ಧರಣಿ ಹಿಂತೆಗೆದುಕೊಳ್ಳುತ್ತೇವೆ” ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಬೀದರ್ ಸಹಾಯಕ ಆಯುಕ್ತ ಮೊಹಮ್ಮದ್ ಶಕೀಲ್ ಹಾಗೂ ತಹಸೀಲ್ದಾರ್ ಮಹೇಶ ಪಾಟೀಲ್ ಅವರು ಬುಧವಾರ ಸಂಜೆ ಧರಣಿ ಸ್ಥಳಕ್ಕೆ ಭೇಟಿ ನೀಡಿ, “ಅಲೆಮಾರಿ ಜನಾಂಗಕ್ಕೆ ಮಂಜೂರಾದ ಜಾಗವನ್ನು ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಅಲೆಮಾರಿಗಳಿಗೆ ಮೀಸಲಾದ ಸರ್ವೇ ನಂ.183ರ ಜಾಗವೂ ಹಂಚಿಕೆಯಾಗಲಿದೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡ ರಾಹುಲ್ ಖಂದಾರೆ ಮಾತನಾಡಿ, “ಕಳೆದ ನಾಲ್ಕು ದಶಕಗಳಿಂದ 200ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಮೂಲಭೂತ ಸೌಲಭ್ಯಗಳಿಲ್ಲದೆ ಬೀದಿಯಲ್ಲಿ ನರಕಯಾತನೆ ಅನುಭವಿಸುತ್ತಿವೆ. ಹಲವು ವರ್ಷಗಳಿಂದ ವಸತಿಗಾಗಿ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ಕೇವಲ ಭರವಸೆಗೆ ಸೀಮಿತವಾಗಿದೆ. ಇನ್ನು ಮುಂದೆ ಭರವಸೆಯಿಂದ ಸಮಾಧಾನಪಡಿಸುವ ಪ್ರಯತ್ನ ಬೇಡ. ಶಾಶ್ವತ ನಿವೇಶನ ನೀಡಿ, ಲಿಖಿತ ಆದೇಶ ಕೈಗೆ ಕೊಡಿ. ಅದುವರೆಗೂ ಧರಣಿ ಮುಂದುವರೆಯಲಿದೆ” ಎಂದು ಎಚ್ಚರಿಸಿದರು.
ಧರಣಿ ಸ್ಥಳಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ. ಪುಂಡಲೀಕರಾವ್, ಅರವಿಂದಕುಮಾರ ಅರಳಿ, ಎದ್ದೇಳು ಕರ್ನಾಟಕ ರಾಜ್ಯ ಸಮಿತಿಯ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ, ಸಾಮಾಜಿಕ ಕಾರ್ಯಕರ್ತರಾದ ಮಹೇಶ ಗೊರನಾಳಕರ್, ಜಗದೀಶ್ವರ ಬಿರಾದರ, ಸಂದೀಪ ಮುಕಿಂದೆ, ಲಕ್ಷ್ಮಣ ಮಂಡಲಗೇರಾ, ಶಕ್ತಿಕಾಂತ ಭಾವಿದೊಡ್ಡಿ, ಶಿವಮೂರ್ತಿ ಬಳತ್, ರಾಮಣ್ಣ ಒಡೆಯರ್, ಬಸವರಾಜ ಶೆಟಕಾರ್ ಸೇರಿದಂತೆ ಹಲವರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಹೋರಾಟಗಾರರು ಮಾತನಾಡಿ, “ಹಿಂದುಳಿದ ವರ್ಗಗಳ ಇಲಾಖೆಯಿಂದ ಪಟ್ಟಣದ ಹೊರವಲಯದ ಸರ್ವೇ ನಂ.183ರಲ್ಲಿ 2 ಎಕರೆ ಸರ್ಕಾರಿ ಜಮೀನು ಈಗಾಗಲೇ ಮಂಜೂರಾಗಿದೆ. ಆದರೆ ರಾಜಕೀಯ ಒತ್ತಡದಿಂದ ಅದನ್ನು ರದ್ದುಪಡಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಪಟ್ಟಣದಿಂದ ದೂರದ ಸರ್ವೇ ನಂ.205ರಲ್ಲಿ ನಿವೇಶನ ನೀಡಲು ಯತ್ನಿಸಲಾಗುತ್ತಿದೆ. ಅದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸರ್ವೇ ನಂ.183ರ ನಿವೇಶನ ರದ್ದತಿ ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆದು, ಅದೇ ಸ್ಥಳದಲ್ಲಿ ಇನ್ನೂ 2 ಎಕರೆ ಹೆಚ್ಚುವರಿ ಜಾಗವನ್ನು ಅಲೆಮಾರಿ ಸಮುದಾಯಕ್ಕೆ ನೀಡಬೇಕು” ಎಂದು ಆಗ್ರಹಿಸಿದರು.
ಅಧಿಕಾರಿಗಳು ಈ ಹಿಂದೆ ಅನೇಕ ಬಾರಿ ನೀಡಿದ ಪೊಳ್ಳು ಭರವಸೆಗಳನ್ನು ಉಲ್ಲೇಖಿಸಿದ ಪ್ರತಿಭಟನಾಕಾರರು, “ಈಗ ನೀಡುವ ಭರವಸೆಗಳು ಘೋಷಣೆಯಲ್ಲ, ಅಧಿಕೃತ ಲಿಖಿತ ಆದೇಶವಾಗಬೇಕು. ಮಂಜೂರಾದ ಜಾಗದಲ್ಲಿ ನಾಮಫಲಕ ಅಳವಡಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಕೊಂಡೊಯ್ಯಲಾಗುವುದು” ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸಿ ಮೊಹಮ್ಮದ್ ಶಕೀಲ್, “ಅಲೆಮಾರಿ ಸಮುದಾಯಕ್ಕೆ ಸರ್ಕಾರದಿಂದ ಮಂಜೂರಾದ ಜಾಗವನ್ನು ಅನ್ಯರಿಗೆ ಹಂಚಿಕೆ ಮಾಡಿಲ್ಲ. ಆ ಜಾಗದ ರದ್ದತಿ ಕೋರಿ ತಾಲೂಕು ಆಡಳಿತ ಸಲ್ಲಿಸಿರುವ ಪ್ರಸ್ತಾವನೆಯನ್ನು ಹಿಂಪಡೆಯಲು ಸೂಚಿಸಲಾಗುವುದು. ಆದರೆ ಪ್ರಕ್ರಿಯೆಗೆ ನಾಲ್ಕೈದು ದಿನಗಳ ಸಮಯ ಬೇಕಾಗುತ್ತದೆ” ಎಂದು ತಿಳಿಸಿ ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದರು.
ಆದರೆ ಧರಣಿನಿರತರು, “ನಾಲ್ಕು ದಿನಗಳಾದರೂ ಪರವಾಗಿಲ್ಲ. ಸರ್ಕಾರದ ಪ್ರಕ್ರಿಯೆಯಂತೆ ತಕ್ಷಣ ಲಿಖಿತ ಆದೇಶ ಹೊರಡಿಸಿ ಅದರ ಪ್ರತಿಯನ್ನು ನಮ್ಮ ಕೈಗೆ ನೀಡಬೇಕು. ಬರೀ ಭರವಸೆಯಿಂದ ನಾವು ಧರಣಿ ಸ್ಥಳದಿಂದ ಕದಲುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ ಬಳಿಕ ಅಧಿಕಾರಿಗಳು ಸ್ಥಳದಿಂದ ತೆರಳಿದರು








