ಕಲಬುರಗಿ/ಬೀದರ್, ಸೋಮವಾರ:
ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸರ್ಕಾರಿ ಅನುಮತಿ ಇಲ್ಲದೇ ನಿರ್ಮಿಸಲಾಗಿದ್ದ ಅನಧಿಕೃತ ಚೆಕ್‌ಪೋಸ್ಟ್‌ನಲ್ಲಿ ಸಾರ್ವಜನಿಕರಿಂದ ಗಂಟೆಗೆ 8 ರಿಂದ 10 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದ ಹಗಲು ದರೋಡೆ ದಂಧೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ ವೇಳೆ ಬಹಿರಂಗವಾಗಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, “ಅಧಿಕೃತವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ದರೋಡೆ ನಡೆಯುತ್ತಿದೆ. ಇದು ಅತ್ಯಂತ ಗಂಭೀರ ವಿಷಯ” ಎಂದು ಕಿಡಿಕಾರಿದರು.
ನಾಲ್ಕು ಜಿಲ್ಲೆಗಳಲ್ಲಿ ನಿರಂತರ ಪರಿಶೀಲನೆ
ಲೋಕಾಯುಕ್ತ ತಂಡವು ಬೀದರ್, ಕಲಬುರಗಿ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಸೋಮವಾರದ ತಪಾಸಣೆ ವೇಳೆ ಹುಮನಾಬಾದ್ ಸಮೀಪ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸರ್ಕಾರಕ್ಕೆ ಸಂಬಂಧವೇ ಇಲ್ಲದ ಚೆಕ್‌ಪೋಸ್ಟ್ ನಿರ್ಮಿಸಿ, ವಾಹನಗಳನ್ನು ನಿಲ್ಲಿಸಿ ಅನಧಿಕೃತವಾಗಿ ಹಣ ಸಂಗ್ರಹಿಸುತ್ತಿರುವುದು ಪತ್ತೆಯಾಗಿದೆ.
ಆರ್‌ಟಿಒ ಹೆಸರಿನ ದುರುಪಯೋಗ
ಪರಿಶೀಲನೆಯ ವೇಳೆ ದೂರದಲ್ಲಿ “ಆರ್‌ಟಿಒ”, “ಎಆರ್‌ಟಿಒ” ಎಂದು ಬರೆದಿರುವ ಫಲಕಗಳನ್ನು ಅಳವಡಿಸಿ, ವಾಹನ ಚಾಲಕರನ್ನು ಭಯಪಡಿಸಿ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನೇರವಾಗಿ ಅಧಿಕಾರಿಗಳು ಹಣ ವಸೂಲಿ ಮಾಡದೇ, ಎಜೆಂಟ್‌ಗಳ ಮೂಲಕ ಬಾಕ್ಸ್‌ನಲ್ಲಿ ಹಣ ಸಂಗ್ರಹಿಸಲಾಗುತ್ತಿತ್ತು.
ಎರಡು-ಮೂರು ಗಂಟೆಗೊಮ್ಮೆ ಸಾಲಿನಲ್ಲಿ ನಿಂತಿರುವ ವಾಹನಗಳ ಬಳಿ ಹಣದ ಬಾಕ್ಸ್‌ಗಳನ್ನು ಬದಲಾಯಿಸಿ, ಯಾವುದೇ ಅನುಮಾನ ಬಾರದಂತೆ ದಂಧೆ ನಡೆಸಲಾಗುತ್ತಿತ್ತು. ಇದೊಂದು ಸಂಘಟಿತ ಹಗಲು ದರೋಡೆ ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟರು.
ಪ್ರಕರಣ ದಾಖಲು, ಚೆಕ್‌ಪೋಸ್ಟ್ ತೆರವು
ಘಟನೆ ಗಮನಕ್ಕೆ ಬಂದ ತಕ್ಷಣವೇ ಅನಧಿಕೃತ ಚೆಕ್‌ಪೋಸ್ಟ್ ತೆರವುಗೊಳಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. “ಆರ್‌ಟಿಒ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಇದು ನಮ್ಮ ವ್ಯಾಪ್ತಿಗೆ ಸೇರಿಲ್ಲ ಎಂದು ಜವಾಬ್ದಾರಿ ತಪ್ಪಿಸುತ್ತಿದ್ದಾರೆ” ಎಂದು ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರಕರಣದ ಸಂಬಂಧ ಜಂಟಿ ಸಾರಿಗೆ ಆಯುಕ್ತರನ್ನು ಕರೆಸಿ ವಿಚಾರಣೆ ನಡೆಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಆಳಂದದಲ್ಲೂ ಅಕ್ರಮ ಪತ್ತೆ
ಇದೇ ರೀತಿಯ ಅಕ್ರಮ ಚೆಕ್‌ಪೋಸ್ಟ್ ಕಲಬುರಗಿ ಜಿಲ್ಲೆಯ ಆಳಂದ ಸಮೀಪದಲ್ಲಿಯೂ ಪತ್ತೆಯಾಗಿದ್ದು, ಅಲ್ಲಿಯೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಗೆ ದಿಢೀರ್ ಭೇಟಿ
ಇದಕ್ಕೂ ಮುನ್ನ ಲೋಕಾಯುಕ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ವೇಳೆ 55 ಮಾಜಿ ಸೈನಿಕರಿಗೆ ಭೂಮಿ ಮಂಜೂರು ಮಾಡುವಲ್ಲಿ ವಿಳಂಬವಾಗಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ದೇಶಕ್ಕಾಗಿ ಸೇವೆ ಸಲ್ಲಿಸಿದ ಸೈನಿಕರಿಗೆ ಭೂಮಿ ಮಂಜೂರಿನಲ್ಲಿ ವಿಳಂಬ ಅಕ್ಷಮ್ಯ. ಕೂಡಲೇ ಮಂಜೂರಿಗೆ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.







