ಬೆಂಗಳೂರು:
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನದಲ್ಲಿ ಸಂಪೂರ್ಣ ಭಾಷಣ ವಾಚಿಸದೆ ಕೇವಲ ಚುಟುಕು ಭಾಷಣ ಮಾಡಿದ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆರಳಿಸಿದ್ದು, ಇತ್ತ ರಾಜ್ಯಪಾಲರ ವಿರುದ್ಧದ ಟೀಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯಪಾಲರು ಸರ್ಕಾರ ನೀಡಿದ ಲಿಖಿತ ಭಾಷಣವನ್ನು ಸಂಪೂರ್ಣವಾಗಿ ಓದಿಲ್ಲ, ಇದು ಸಂವಿಧಾನಕ್ಕೆ ವಿರುದ್ಧ ಹಾಗೂ ಸದನಕ್ಕೆ ಅಗೌರವ ಎಂದು ಆಡಳಿತ ಪಕ್ಷ ಆರೋಪಿಸುತ್ತಿರುವ ಬೆನ್ನಲ್ಲೇ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಹತ್ವದ ಹೇಳಿಕೆ ನೀಡಿದ್ದು, ಈ ವಿವಾದಕ್ಕೆ ಹೊಸ ತಿರುವು ನೀಡಿದೆ.
“ರೀಡ್ ಅಂಡ್ ರೆಕಾರ್ಡ್ ರೂಲ್ ಅನ್ವಯ”
ವಿಧಾನ ಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸಭಾನಾಯಕ ಎನ್.ಎಸ್. ಬೋಸರಾಜು, ರಾಜ್ಯಪಾಲರು ಸಂವಿಧಾನದ 176 ಮತ್ತು 163 ವಿಧಿಗಳ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಮೂಲಕ ಸದನಕ್ಕೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ,
“ರಾಜ್ಯಪಾಲರು ತಮ್ಮ ಲಿಖಿತ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾಗಳನ್ನು ಓದಿದ್ದಾರೆ. ಸಂಸತ್ತೀಯ ನಿಯಮಗಳ ಪ್ರಕಾರ ಮೊದಲ ಮತ್ತು ಕೊನೆಯ ಭಾಗ ಓದಿದ್ದರೆ ಅದನ್ನು ‘ರೀಡ್ ಅಂಡ್ ರೆಕಾರ್ಡ್’ ಎಂದು ಪರಿಗಣಿಸಬೇಕಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಸಭಾಪತಿ ಹೊರಟ್ಟಿ ಅವರ ಈ ಹೇಳಿಕೆಯಿಂದ ಆಡಳಿತ ಪಕ್ಷದ ಆಕ್ಷೇಪಕ್ಕೆ ತಾತ್ಕಾಲಿಕವಾಗಿ ತಣ್ಣೀರು ಎರಚಿದಂತಾಯಿತು.
ಸದನದಲ್ಲಿ ಗದ್ದಲ
ಸಭಾನಾಯಕ ಬೋಸರಾಜು ಅವರ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ,
“ರಾಜ್ಯಪಾಲರು ಸಂವಿಧಾನಬದ್ಧವಾಗಿ ನಡೆದುಕೊಂಡಿದ್ದಾರೆ” ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು,
“ರಾಜ್ಯಪಾಲರು ಸರ್ಕಾರದ ಭಾಷಣವನ್ನು ಓದದೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ” ಎಂದು ಜೋರಾಗಿ ಹೇಳತೊಡಗಿದರು. ಇದರಿಂದ ಕೆಲಕಾಲ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಜೆಡಿಎಸ್ ಸದಸ್ಯರ ವಾದ
ಜೆಡಿಎಸ್ ಸದಸ್ಯ ಬೋಜೇಗೌಡ ಮಾತನಾಡಿ,
“ರಾಜ್ಯಪಾಲರು ಸಂಪೂರ್ಣ ಭಾಷಣ ಓದಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅವರು ಪೂರ್ಣ ಪ್ರಮಾಣದಲ್ಲಿ ಭಾಷಣ ವಾಚಿಸಿಲ್ಲ. ಹೀಗಾಗಿ ಭಾಷಣ ಅಪೂರ್ಣವಾಗಿಯೇ ಉಳಿದಿದೆ ಎಂಬ ಭಾವನೆ ಮೂಡುತ್ತದೆ” ಎಂದು ಅಭಿಪ್ರಾಯಪಟ್ಟರು.
“ಇದು ಅಪೂರ್ವ ಅಗೌರವ” – ಸಲೀಂ ಅಹಮದ್
ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್ ತೀವ್ರ ಪ್ರತಿಕ್ರಿಯೆ ನೀಡಿ,
“ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯಪಾಲರು ಸರ್ಕಾರ ನೀಡಿದ ಭಾಷಣವನ್ನು ಓದದೆ ಬಿಟ್ಟಿದ್ದಾರೆ. ಇದು ಅತ್ಯಂತ ಖಂಡನೀಯ. ಸಂವಿಧಾನಕ್ಕೆ ರಾಜ್ಯಪಾಲರು ಅಪಚಾರ ಮಾಡಿದ್ದಾರೆ” ಎಂದು ಆರೋಪಿಸಿದರು.
ಅಂತಿಮ ತೀರ್ಮಾನ ಮುಂದೂಡಿಕ
ವಿವಾದ ತಾರಕಕ್ಕೇರುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ,
“ಈ ವಿಷಯವನ್ನು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು” ಎಂದು ಹೇಳಿ, ವಿಷಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ನಂತರ ಸಂತಾಪ ಸೂಚನೆ ಪ್ರಸ್ತಾವನೆ ಮಂಡಿಸಿ ಕಲಾಪ ಮುಂದುವರಿಸಿದರು.
ರಾಜ್ಯಪಾಲರ ಭಾಷಣದ ವಿಚಾರ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.







