ಬೆಂಗಳೂರು: 2026ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಫೆಬ್ರುವರಿ 16ರವರೆಗೆ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ. ಅರ್ಜಿ ಶುಲ್ಕ ಪಾವತಿಸಲು ಫೆಬ್ರುವರಿ 18 ಕೊನೆಯ ದಿನವಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಇಎ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಲಿಂಕ್ ಬಿಡುಗಡೆ ಮಾಡಲಾಗಿದ್ದು, ಎಂಜಿನಿಯರಿಂಗ್, ಪಶುವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ಕೌನ್ಸೆಲಿಂಗ್ ಮೂಲಕ ಪ್ರವೇಶ ಕಲ್ಪಿಸಲಾಗುತ್ತದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಅಂಕಗಳ ಆಧಾರದ ಮೇಲೆ ಮಾತ್ರ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅರ್ಜಿ ಸಲ್ಲಿಕೆಗೆ ಸಾಕಷ್ಟು ಸಮಯ ನೀಡಲಾಗಿರುವುದರಿಂದ ಅಭ್ಯರ್ಥಿಗಳು ಸಿಇಟಿ ಮಾಹಿತಿಯನ್ನು ಸಾವಧಾನದಿಂದ ಓದಿ, ಮನನ ಮಾಡಿಕೊಂಡ ನಂತರ ಅರ್ಜಿ ಭರ್ತಿ ಮಾಡಬೇಕು. ತಮಗೆ ಅನ್ವಯವಾಗುವ ಮೀಸಲಾತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪೂರ್ವಸಿದ್ಧತೆ ಮಾಡಿಕೊಂಡು ಅರ್ಜಿ ಸಲ್ಲಿಸುವಂತೆ ಅವರು ಸಲಹೆ ನೀಡಿದ್ದಾರೆ.
ಈ ಬಾರಿ ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆಧಾರ್ ಆಧಾರಿತವಾಗಿದ್ದು, ಅಭ್ಯರ್ಥಿಗಳ ಹೆಸರು ಸೇರಿದಂತೆ ಮೂಲಭೂತ ಮಾಹಿತಿಗಳು ಸ್ವಯಂಚಾಲಿತವಾಗಿ ಅರ್ಜಿಯಲ್ಲಿ ಸೇರಿಕೊಳ್ಳಲಿವೆ. ಜೊತೆಗೆ ಪ್ರತಿಯೊಂದು ಹಂತದ ಮಾಹಿತಿಯನ್ನು ಇ-ಮೇಲ್ ಮೂಲಕ ಓಟಿಪಿ ಸಹಿತವಾಗಿ ತಿಳಿಸುವ ವ್ಯವಸ್ಥೆ ಮಾಡಲಾಗಿದೆ. ವಾಟ್ಸ್‌ಆಪ್ ಮೂಲಕವೂ ಸಂದೇಶಗಳನ್ನು ಕಳುಹಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಅರ್ಜಿ ಭರ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಲ್ಲಾ ಕಾಲೇಜುಗಳ ಸಿಬ್ಬಂದಿಗೆ ಹತ್ತು ದಿನಗಳ ಕಾಲ ಆನ್‌ಲೈನ್ ತರಬೇತಿ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ತಮ್ಮ ಕಾಲೇಜುಗಳಲ್ಲಿಯೇ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಅಗತ್ಯವಿದ್ದಲ್ಲಿ ಉಪನ್ಯಾಸಕರ ನೆರವು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಯಾಟ್ಸ್ ಹಾಗೂ ಆರ್‌ಡಿ ಸಂಖ್ಯೆಯನ್ನು ದಾಖಲಿಸಿದ ನಂತರ ಆನ್‌ಲೈನ್ ಮೂಲಕ ಪರಿಶೀಲನೆ ಪೂರ್ಣಗೊಳ್ಳುವ ಅಭ್ಯರ್ಥಿಗಳು ಯಾವುದೇ ಕಾಲೇಜಿಗೆ ದಾಖಲೆ ಪರಿಶೀಲನೆಗಾಗಿ ತೆರಳುವ ಅಗತ್ಯವಿಲ್ಲ. ಅವರು ನೇರವಾಗಿ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು. ಆದರೆ ಆನ್‌ಲೈನ್ ಪರಿಶೀಲನೆ ಆಗದ ಅಭ್ಯರ್ಥಿಗಳು ಕಾಲೇಜು ಹಂತದಲ್ಲೇ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು. ಪರಿಶೀಲನೆಯ ನಂತರ ಮಾತ್ರ ಅರ್ಜಿ ಮುದ್ರಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ವರ್ಷದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 23 ಮತ್ತು 24ರಂದು ನಡೆಸಲು ಈಗಾಗಲೇ ದಿನಾಂಕಗಳನ್ನು ಘೋಷಿಸಲಾಗಿದ್ದು, ಅದಕ್ಕೆ ಅನುಗುಣವಾಗಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೆಚ್. ಪ್ರಸನ್ನ ತಿಳಿಸಿದ್ದಾರೆ.
Sorce: ವಾರ್ತಾಭಾರತಿ







