Home » ರಾಜ್ಯ » ಮೀಸಲಾತಿ ವರ್ಗೀಕರಣ ವಿರುದ್ಧ ರಾಜ್ಯಮಟ್ಟದ ಪ್ರತಿಭಟನೆಗೆ ಸಿದ್ಧತೆ

ಮೀಸಲಾತಿ ವರ್ಗೀಕರಣ ವಿರುದ್ಧ ರಾಜ್ಯಮಟ್ಟದ ಪ್ರತಿಭಟನೆಗೆ ಸಿದ್ಧತೆ

ರಾಜರಾಜೇಶ್ವರಿ ನಗರ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗಿಕರಣದಲ್ಲಿ ಭೋವಿ, ಬಂಜಾರ, ಕೊರಮ, ಕೊರಚ, ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯದ ವಿರುದ್ಧ ರಾಜ್ಯ ಸರ್ಕಾರದ ವಿರುದ್ಧ ಮಾರ್ಚ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಚಿತ್ರದುರ್ಗ ಭೋವಿ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಅಂದ್ರಹಳ್ಳಿಯ ಚಕ್ರನಗರದಲ್ಲಿ ನಡೆದ ಸಿದ್ದರಾಮೇಶ್ವರ ಜಯಂತ್ಯೋತ್ಸವ ಹಾಗೂ ಸಿದ್ದರಾಮೇಶ್ವರ ಭೋವಿ (ವಡ್ಡರ) ಬಳಗ-ಬೆಂಗಳೂರು ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಪ್ರವರ್ಗದಲ್ಲಿ ‘ಸಿ’ ಎಂಬ ಸೂತ್ರದ ಮೂಲಕ ಒಳ ಮೀಸಲಾತಿಯೊಳಗೆ ಮತ್ತೊಂದು ಒಳ ಮೀಸಲಾತಿ ತರಲಾಗುತ್ತಿದೆ. ಇದು ಪರಿಶಿಷ್ಟ ಜಾತಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದ್ದು, ಪ್ರವರ್ಗ ‘ಸಿ’ ಸೂತ್ರವನ್ನು ತಿರಸ್ಕರಿಸಬೇಕು ಎಂದು ಅವರು ಒತ್ತಾಯಿಸಿದರು.
ಭೋವಿ ಜನಾಂಗ ಶ್ರಮಜೀವಿಗಳು, ಬೆವರು ಸುರಿಸಿ ದುಡಿದು ಬದುಕುವ ಸಮುದಾಯ. ಕೂಲಿ ಸಿಗುವ ಕಡೆ ವಲಸೆ ಹೋಗುವ ಅಲೆಮಾರಿ ಜನಾಂಗಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಬಜೆಟ್ ಅಧಿವೇಶನ ಸಮಯದಲ್ಲಿ ಹೋರಾಟ ನಡೆಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿ ಗೌಡ ಮಾತನಾಡಿ, ಭೋವಿ ಜನಾಂಗ ಮುಗ್ಧ, ಪ್ರಾಮಾಣಿಕ ಹಾಗೂ ರಾಷ್ಟ್ರ ನಿರ್ಮಾಣ ಮತ್ತು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸಮುದಾಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭೋವಿ (ವಡ್ಡರ) ಜನಾಂಗದ ಅಧ್ಯಕ್ಷ ರವಿ ಎಚ್. ಮಾಕಳಿ, ಎಂ.ಆರ್‌.ಟಿ ಸಂಸ್ಥೆಯ ಮಾಲೀಕ ಅಂದ್ರಹಳ್ಳಿ ಪ್ರಕಾಶ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಜಯಶಂಕರ್, ಬೆಂಗಳೂರು ನಗರ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎ. ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಗದ ಅಧ್ಯಕ್ಷ ಭೀಮರಾಜು, ಜೆಡಿಎಸ್ ಮುಖಂಡ ಗೋಪಾಲ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This