ಭಾಲ್ಕಿ:
ಮಾಜಿ ಸಚಿವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ರಾಜಕೀಯ ನಾಯಕರು ಆದ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ರಾತ್ರಿ ಭಾಲ್ಕಿಯಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ದೀರ್ಘಕಾಲದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಬೀದರ್ ನಗರದ ಗುದಗೆ ಮಲ್ಟಿ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜೀವರಕ್ಷಕಗಳ ಸಹಾಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯದಲ್ಲಿ ಸತತ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರ (ಜ.12) ಅವರನ್ನು ಮನೆಗೆ ಕರೆದೊಯ್ಯಲಾಗಿತ್ತು. ಬಳಿಕ ಮನೆಯಲ್ಲಿಯೇ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಮಧ್ಯದಲ್ಲಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದರೂ, ಶುಕ್ರವಾರ ಮತ್ತೆ ಏರುಪೇರು ಉಂಟಾಗಿ ರಾತ್ರಿ ಅವರು ಕೊನೆಯುಸಿರೆಳೆದರು.
ಅನಾರೋಗ್ಯದ ಹಿನ್ನೆಲೆ: ಕುಟುಂಬದವರು ಎಲ್ಲಾ ಕಾರ್ಯಕ್ರಮಗಳಿಂದ ದೂರ
ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಪರಿಸರ–ಅರಣ್ಯ–ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ, ಮೊಮ್ಮಗ ಸಾಗರ ಖಂಡ್ರೆ ಸೇರಿದಂತೆ ಕುಟುಂಬದ ಸದಸ್ಯರು ಎಲ್ಲಾ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದು ಮನೆಯಲ್ಲಿಯೇ ಇದ್ದರು.
ಭೀಮಣ್ಣ ಖಂಡ್ರೆಯವರ ಆರೋಗ್ಯದ ಕುರಿತು ತಿಳಿದುಕೊಂಡು ಕಳೆದ ಹಲವು ದಿನಗಳಿಂದ ವಿವಿಧ ಮಠಾಧೀಶರು, ಸಚಿವರು, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಬೆಂಬಲಿಗರು ಅವರ ಮನೆಗೆ ಭೇಟಿ ನೀಡಿ ವಿಚಾರಿಸಿದ್ದರು.
ರಾಜಕೀಯ ಮತ್ತು ಸಾಮಾಜಿಕ ಜೀವನ
ಭೀಮಣ್ಣ ಖಂಡ್ರೆ ಅವರು ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ ಅವರು, 1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿದ್ದರು. ಸರಳ ಜೀವನ, ಜನಸಂಪರ್ಕ ಮತ್ತು ಸಮಾಜಮುಖಿ ಚಿಂತನೆಗಳಿಂದ ಅವರು ಅಪಾರ ಗೌರವ ಗಳಿಸಿದ್ದರು.
ಕುಟುಂಬ ಹಿನ್ನೆಲೆ
ಭೀಮಣ್ಣ ಖಂಡ್ರೆಯವರಿಗೆ
ಇಬ್ಬರು ಪುತ್ರರು
ಐದು ಮಂದಿ ಪುತ್ರಿಯರು
ಇದ್ದಾರೆ.
ಅವರ ಪತ್ನಿ ಲಕ್ಷ್ಮೀಬಾಯಿ ಖಂಡ್ರೆ ಮತ್ತು ಹಿರಿಯ ಪುತ್ರ, ಮಾಜಿ ಶಾಸಕ ವಿಜಯಕುಮಾರ್ ಖಂಡ್ರೆ ಅವರು ಈ ಹಿಂದೆಯೇ ನಿಧನರಾಗಿದ್ದಾರೆ.
ಶನಿವಾರ ಅಂತ್ಯಕ್ರಿಯೆ
ಭೀಮಣ್ಣ ಖಂಡ್ರೆಯವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಶನಿವಾರ (ಜ.17) ನಡೆಯಲಿದೆ ಎಂದು ಅವರ ಪುತ್ರರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಭಾಲ್ಕಿಯ ಗಾಂಧಿ ಗಂಜ್‌ನಲ್ಲಿರುವ ಅವರ ನಿವಾಸದ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.
ಸಂಜೆ ಭಾಲ್ಕಿ ಹೊರವಲಯದ ಚಿಕಲಚಂದಾ ಗ್ರಾಮದ ಸಮೀಪದ ಶಾಂತಿಧಾಮದಲ್ಲಿ, ಅವರ ಪತ್ನಿ ದಿವಂಗತ ಲಕ್ಷ್ಮೀಬಾಯಿ ಖಂಡ್ರೆ ಅವರ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನೆರವೇರಲಿವೆ.







